ವೀರಾಜಪೇಟೆ, ಮಾ. ೩: ವೀರಾಜಪೇಟೆ ಪ.ಪಂ.ಯ ಆಯವ್ಯಯ ಪೂರ್ವಭಾವಿ ಸಭೆ ಎರಡನೇ ಬಾರಿಗೆ ಇಂದು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಮೊದಲಿಗೆ ಪ.ಪಂ ಹಿರಿಯ ಸದಸ್ಯ ಪೃಥ್ವಿನಾಥ್ ಸಿ.ಕೆ ಆಯವ್ಯಯದ ಕರಡು ಪ್ರತಿಯನ್ನು ಸದಸ್ಯರಿಗೆ ಮುಂಚಿತವಾಗಿ ನೀಡದೆ ಸಭೆ ನಡೆಸುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಆ ರೀತಿಯ ಪದ್ಧತಿಯಿಲ್ಲ ಪೂರ್ವಭಾವಿ ಸಭೆಗೆ ಅದರ ಅವಶ್ಯಕತೆಯಿಲ್ಲ ಎಂದಾಗ ಪ.ಪಂ. ಸದಸ್ಯ ಮೊಹಮ್ಮದ್ ರಾಫಿ ಹಿಂದಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ನೀವು ಅಗತ್ಯ ಮಾಹಿತಿ ನೀಡದ ಕಾರಣ ಅಗತ್ಯ ಮಾಹಿತಿಗಳ ಜೊತೆಗೆ ಸಭೆ ಮಾಡಿ ಎಂದು ಸಭೆಯನ್ನು ನಿಲ್ಲಿಸಲಾಗಿತ್ತು. ಮತ್ತೆ ಎರಡನೇ ಸಭೆಗೂ ನೀವು ಹೀಗೆ ಮಾಹಿತಿ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಪ.ಪಂ. ಸದಸ್ಯ ರಾಜೇಶ್ ಪದ್ಮನಾಭ ಪ.ಪಂ.ಗೆ ಸುಮಾರು ೪೬ ಲಕ್ಷ ಬಾಡಿಗೆ ವಸೂಲಿ ಆಗಬೇಕು. ಆದರೆ ರೂ. ೧೮ ಲಕ್ಷ ಮಾತ್ರ ವಸೂಲಿ ಆಗಿದೆ. ಬಾಡಿಗೆ, ತೆರಿಗೆ ಹಣವನ್ನು ವಸೂಲಿ ಮಾಡದೇ ಬಾಕಿ ಉಳಿಸಿಕೊಂಡಿರುವುದು ಏಕೆ? ಇದಕ್ಕೆ ಇರುವ ತೊಂದರೆಗಳೇನು ಸಭೆಗೆ ತಿಳಿಸಿ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ತೆರಿಗೆ ವಸೂಲಿ ಮಾಡಲು ಎಲ್ಲಾ ಬ್ಲಾಕ್ಗಳಿಗೆ ನೋಟೀಸ್ ಜಾರಿ ಮಾಡುತ್ತಿದ್ದೇವೆ. ನೀರಿನ ಬಾಕಿ ಕಟ್ಟಲು ಕೂಡ ನಾಗರಿಕರಿಗೆ ನೋಟೀಸ್ ನೀಡಲಾಗಿದೆ ಎಂದರು. ವಿರೋಧ ಪಕ್ಷದ ಬಹುತೇಕ ಸದಸ್ಯರು ಪ.ಪಂ.ಯ ಬೊಕ್ಕಸಕ್ಕೆ ಬರಬೇಕಾದ ಆದಾಯವನ್ನು ವಸೂಲಿ ಮಾಡದೇ ಇರುವ ಬಗ್ಗೆ ಅಧಿಕಾರಿಗಳನ್ನು, ಅಧ್ಯಕ್ಷರನ್ನು ಪ್ರಶ್ನೆ ಮಾಡಿದರು.
ಪ.ಪಂ. ಸದಸ್ಯ ಪೃಥ್ವಿನಾಥ್ ವೀರಾಜಪೇಟೆ ಪಟ್ಟಣ ಪಂಚಾಯಿತಿ ಕೇವಲ ಫಾರ್ಮ್ ನಂ. ೩ ಕೊಡಲು ಹಾಗೂ ಎನ್.ಒ.ಸಿ. ಕೊಡಲು ಮಾತ್ರ ಸೀಮಿತವಾಗಿದೆ. ಅದು ಬಿಟ್ಟು ಮಿಕ್ಕ ಕೆಲಸಗಳಿಗೆ ಜನರನ್ನು ಇಲ್ಲಿ ಅಲೆದಾಡಿಸಲಾಗುತ್ತಿದೆ ಎಂದು ಆಂಗೀಕ ಅಭಿನಯ ಮಾಡಿ ತೋರಿಸಿದಾಗ ಪ.ಪಂ. ಅಧ್ಯಕ್ಷೆ ಸುಶ್ಮಿತಾ ನೃತ್ಯ ಮಾಡಲು ಇದು ಆವರಣವಲ್ಲ, ಸಭಾ ಮರ್ಯಾದೆ ಕಾಪಾಡುವಂತೆ ತಾಕೀತು ಮಾಡಿದರು.
ಇತ್ತೀಚೆಗೆ ಸುಂಕದಕಟ್ಟೆಯ ಪಂಪ್ ಕೆರೆಗೆ ಧರ್ಮಸ್ಥಳ ಸಂಘದವರು ಹೂಳೆತ್ತುವ ಮೂಲಕ ಕೆರೆಗೆ ಮರುಜೀವ ಕೊಡಲು ಮುಂದಾಗಿದ್ದಾರೆ. ಅವರ ಜೊತೆಗೆ ಪ.ಪಂ. ಕೂಡಾ ಕೈಜೋಡಿಸಿ ಇಷ್ಟು ಒಳ್ಳೆಯ ಕೆಲಸ ಮಾಡಿಸುತ್ತಿರುವ ವೀರೇಂದ್ರ ಹೆಗ್ಗಡೆಯವರ ಒಂದು ಮೂರ್ತಿಯನ್ನು, ಅಲ್ಲೊಂದು ಉದ್ಯಾನವನ ಮಾಡಿ ಸ್ಥಾಪನೆ ಮಾಡಲು ಆಯವ್ಯಯದಲ್ಲಿ ಹಣ ಮೀಸಲಿಡಿ ಎಂದು ಪ.ಪಂ. ಸದಸ್ಯ ರಾಜೇಶ್ ಪದ್ಮನಾಭ ಹೇಳಿದರು. ಅಲ್ಲದೇ ಹಿಂದೂ ರುದ್ರಭೂಮಿಯಲ್ಲಿ ಇರುವ ಅವ್ಯವಸ್ಥೆ ಸರಿಪಡಿಸವಂತೆ ಹಾಗೂ ಇನ್ನೊಂದು ಹೆಣಸುಡುವ ಛೇಂಬರ್ ಮಾಡುವಂತೆಯೂ ರಾಜೇಶ್ ಒತ್ತಾಯಿಸಿದಾಗ ವೀರಾಜಪೇಟೆಯ ಎಲ್ಲಾ ಸ್ಮಶಾನಗಳ ಅಭಿವೃದ್ಧಿಗೆ ನಿರ್ಣಯ ಮಾಡುವಂತೆ ಪ.ಪಂ. ಸದಸ್ಯ ರಾಫಿ ತಿಳಿಸಿದರು. ಪ.ಪಂ. ಸದಸ್ಯ ರಜನಿಕಾಂತ್ ಮಿನಿ ವಿಧಾನಸೌಧದ ಮುಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರರ ಪುತ್ಥಳಿ ನಿರ್ಮಿಸಲು ಹಣ ಮೀಸಲಿಡಿ ಎನ್ನುವ ಸಲಹೆಗೆ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.
ಅಗಸ್ಟಿನ್ ಬೆನ್ನಿ ಇತ್ತೀಚೆಗೆ ಹಿಮಪಾತದಲ್ಲಿ ನಿಧನರಾದ ಹುತಾತ್ಮ ಯೋಧ ಅಲ್ತಾಫ್ ಅವರ ಹೆಸರನ್ನು ವೀರಾಜಪೇಟೆಯ ರಸ್ತೆಗೆ ಇಟ್ಟು ಗೌರವ ಸೂಚಿಸುವಂತೆ ಕೋರಿದರು.
ಪ.ಪಂ ಸದಸ್ಯೆ ದೇಚಮ್ಮ ಕಾಳಪ್ಪ ವೀರಾಜಪೇಟೆಯ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಿ ಗ್ರಂಥಾಲಯಕ್ಕೆ ಸೂಕ್ತ ಕಟ್ಟಡವನ್ನು ಕಟ್ಟಲು ಹಣ ನೀಡಲು ಪಟ್ಟಣ ಪಂಚಾಯಿತಿಗೆ ತಿಳಿಸಿದರು. ಅಲ್ಲದೇ ಕಾರು ನಿಲ್ದಾಣದಲ್ಲಿರುವ ಸಭಾಂಗಣವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಸಭೆ-ಸಮಾರಂಭ ನಡೆಸಲು ಅನುಕೂಲ ಮಾಡಿಕೊಡುವಂತೆ ಹೇಳಿದರು.
ಪ.ಪಂ. ಸದಸ್ಯ ಮತೀನ್ ಎಸ್.ಹೆಚ್ ವೀರಾಜಪೇಟೆ ನಗರಕ್ಕೆ ಸ್ವಾಗತ ಕೋರುವ ಬೋರ್ಡುಗಳನ್ನು ಹಾಕಬೇಕೆಂದರು.
ಇನ್ನೂ ಹಲವು ವಾರ್ಡ್ಗಳಲ್ಲಿ ಬೇಸಿಗೆಯಲ್ಲಿ ಕಂಡುಬರುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಧನಿಯೆತ್ತಿದರು. ಅದಕ್ಕಾಗಿ ವಿಶೇಷ ನಿಧಿ ಇಡಲು ತಾಕೀತು ಮಾಡಿದರು.
ಸಭೆಯಲ್ಲಿ ಪ.ಪಂ. ಸದಸ್ಯ ಪೃಥ್ವಿನಾಥ್ ಇತ್ತೀಚೆಗೆ ನಿಸರ್ಗ ಬಡಾವಣೆಯಲ್ಲಿ ಹೊಸದಾಗಿ ಮೀನು ಅಂಗಡಿಗೆ ಪರವಾನಗಿ ನೀಡಿರುವ ಕುರಿತು ಪ್ರಸ್ತಾಪಿಸಿ ಇನ್ನು ಮುಂದೆ ಎಲ್ಲರಿಗೂ ಪರವಾನಗಿ ನೀಡಿ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಎಲ್ಲಾ ಕಡೆಯೂ ಕೊಡಲು ಬರುವುದಿಲ್ಲ. ಮೀನು ಮಾರಾಟ ಮಾಡಲೆಂದೆ ಮತ್ಸö್ಯಭವನ ಇರುವಾಗ ಎಲ್ಲಾ ಕಡೆ ಯಾಕೆ ಪರವಾನಗಿ ನೀಡುವುದು ಎಂದರು. ಆಗ ಮುಖ್ಯಾಧಿಕಾರಿ ಹಾಗಾದರೆ ಈಗ ನೀಡಿರುವ ಪರವಾನಗಿಯನ್ನು ಹಿಂಪಡೆಯೋಣ ಎಂದರು.
ಪ.ಪA. ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್, ಮುಖ್ಯ ಅಭಿಯಂತರ ಹೇಮ್ಕುಮಾರ್, ಪ.ಪಂ. ಸದಸ್ಯರುಗಳು ಹಾಜರಿದ್ದರು.