ಸಿದ್ದಾಪುರ, ಮಾ.೩: ಹುತಾತ್ಮ ಯೋಧ ಅಲ್ತಾಫ್ ಅಹಮದ್ ಅವರ ಕುಟುಂಬವನ್ನು ಭೇಟಿ ಮಾಡಿದ ನ್ಯಾಷನಲ್ ವುಮೆನ್ಸ್ ಫ್ರಂಟ್ ಸದಸ್ಯರು ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಚೆನ್ನಯ್ಯನಕೋಟೆಯಲ್ಲಿರುವ ಯೋಧನ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷೆ ಸೌದತ್, ೧೯ ವರ್ಷಗಳ ಕಾಲ ದೇಶ ಸೇವೆ ಮಾಡಿ, ಹುತಾತ್ಮರಾಗಿರುವ ಅಲ್ತಾಫ್ ಅಹಮದ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಹಾಗೂ ಸೌಜನ್ಯಕ್ಕಾದರೂ ಯೋಧನ ಕುಟುಂಬವನ್ನು ಭೇಟಿ ಮಾಡಲು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಂಸದರು ಬರದೇ ಇರುವುದು ಖಂಡನೀಯ. ಇತ್ತೀಚೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಡಿಕೇರಿಗೆ ಬಂದಿದ್ದರೂ ಯೋಧನ ಮನೆಗೆ ಭೇಟಿ ನೀಡದೆ ವಾಪಾಸು ಹೋಗುವ ಮೂಲಕ ನಿರ್ಲಕ್ಷö್ಯ ಮಾಡಿದ್ದಾರೆಂದು ಆರೋಪಿಸಿದರು.
ಸ್ವಂತ ಮನೆ ಕೂಡ ಇಲ್ಲದ ಬಡತನದಲ್ಲಿರುವ ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು ಹಾಗೂ ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ವ್ಯವಸ್ಥೆ ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಬೇಕಾದ ವ್ಯವಸ್ಥೆಗಳನ್ನು ಕೂಡಲೇ ಮಾಡಬೇಕೆಂದು ಅವರು ಒತ್ತಾಯಿಸಿದರು.
ನಿಯೋಗದಲ್ಲಿ ಸಂಘಟನೆಯ ಕಾರ್ಯದರ್ಶಿ ಶಾಝಿಯ, ಪ್ರಮುಖರಾದ ಝಕರಿಯಾ, ನಸೀರಾ ಮತ್ತು ರಿಶಾನಾ ಇದ್ದರು.