*ಗೋಣಿಕೊಪ್ಪ, ಮಾ. ೩: ಕಾಂಗ್ರೆಸ್ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ತಾಲೂಕು ಮಂಡಲ ವತಿಯಿಂದ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಸರ್ಕಾರದ ಆಡಳಿತಾತ್ಮಕ ಕಾರ್ಯವನ್ನು ಜೀರ್ಣಿಸಿಕೊಳ್ಳಲಾಗದ ಕಾಂಗ್ರೆಸ್ ವಿನಾಕಾರಣ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟುಮಾಡುತ್ತಿದೆ ಎಂದು ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ಆರೋಪಿಸಿ ಪ್ರತಿಭಟನೆಯಲ್ಲಿ ನಿರತರಾದರು.

ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್‌ದೇವಯ್ಯ ಮಾತನಾಡಿ, ಮತೀಯ ಶಕ್ತಿಗಳು ಮೆರೆಯಲು ಮುಖ್ಯಕಾರಣ ಸ್ವಾತಂತ್ರ‍್ಯ ಪ್ರಾರಂಭದಲ್ಲಿAದ ಸುದೀರ್ಘ ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಬೆಂಬಲವೇ ಆಗಿದೆ ಎಂದು ದೂರಿದರು. ತಾಲೂಕು ಮಂಡಳ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಮಾತನಾಡಿ ದೇಶದಲ್ಲಿ ದುಷ್ಟ ಶಕ್ತಿಗಳ ಸಂಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಸಂಘಟನೆಗಳನ್ನು ಹತ್ತಿಕ್ಕುವ ಕಾರ್ಯ ನಡೆಯಬೇಕಾಗಿದೆ. ಹಿಂದೂ ದೇಶದಲ್ಲಿ ಹಿಂದುತ್ವದ ಪರ ಕಾರ್ಯನಿರ್ವಹಿಸುವವರನ್ನು ಮತ್ತು ದ್ವನಿ ಎತ್ತುವವರನ್ನು ಕೊಲೆ ಮಾಡುವ ಹಂತಕ್ಕೆ ಕೆಲವು ಸಂಘಟನೆಗಳು ಮುಂದಾಗುತ್ತಿದ್ದು, ಇದು ಖಂಡನೀಯ ಎಂದರು.

ಜಿಲ್ಲಾ ಖಜಾಂಚಿ ಗುಮ್ಮಟಿರ ಕಿಲನ್ ಗಣಪತಿ ಮಾತನಾಡಿ ಸಣ್ಣ ವಿಚಾರಗಳನ್ನೇ ದೊಡ್ಡದು ಮಾಡಿ ಅಧಿವೇಶನವನ್ನು ನಡೆಸದಂತೆ ಮಾಡುವ ಕಾಂಗ್ರೆಸ್ ಧೋರಣೆ ಖಂಡನೀಯ. ಸಾರ್ವಜನಿಕರ ತೆರಿಗೆಯಲ್ಲಿ ಅಧಿವೇಶನ ನಡೆಸುತ್ತಿರುವಾಗ ಜನರ ಬಗ್ಗೆ ಕಾಳಜಿ ಹೊಂದಿರಬೇಕಾಗಿರುವುದು ರಾಜಕೀಯ ಪ್ರಮುಖರ ಕರ್ತವ್ಯ. ಅದನ್ನು ಮರೆತು ಕಾಂಗ್ರೆಸ್ ಪಕ್ಷದ ನಾಯಕರು ಸಮಯವನ್ನು ವ್ಯರ್ಥ ಮಾಡುವ ಮೂಲಕ ತೆರಿಗೆ ಹಣವನ್ನು ವ್ಯಯ ಮಾಡಿದ್ದಾರೆ ಎಂದು ದೂರಿದರು.

ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿದರು. ರಾಜ್ಯ ಕೃಷಿ ಮೋರ್ಚ ಸದಸ್ಯೆ, ಜಿಲ್ಲಾ ಉಸ್ತುವಾರಿ ಮಾಪಂಗಡ ಯಮುನಾ ಚಂಗಪ್ಪ, ತಾಲೂಕು ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಅಜ್ಜಿಕುಟ್ಟೀರ ಪ್ರವೀಣ್‌ಚಂಗಪ್ಪ, ತಾಲೂಕು ಕೃಷಿ ಮೋರ್ಚ ಅಧ್ಯಕ್ಷ ಕಟ್ಟೇರ ಈಶ್ವರ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.