ಮಡಿಕೇರಿ, ಮಾ. ೩ : ರಾಜ್ಯ ವ್ಯಾಪಿ ನೆಲೆಸಿರುವ ಮೊಗೇರ ಸಮಾಜದ ಮಂದಿ ಶೈಕ್ಷಣಿಕ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಮೊಗೇರರ ಅಭಿವೃದ್ಧಿಗಾಗಿ ಮೊಗೇರ ಅಭಿವೃದ್ಧಿ ನಿಗಮ ಸ್ಥಾಪನೆಯ ಅಗತ್ಯವಿದ್ದು, ಈ ಕುರಿತು ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವುದಾಗಿ ಕೊಡಗು ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಮೊಗೇರ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತುಳುನಾಡಿನ ಮೂಲ ನಿವಾಸಿ ಜನಾಂಗÀ ಮೊಗೇರ ಸಮಾಜ ರಾಜ್ಯದ ವಿವಿಧೆಡೆ ನೆಲೆಸಿದೆ. ಶ್ರಮಜೀವಿಗಳಾದ ನಾವು ಎಲ್ಲಾ ರಂಗಗಳಲ್ಲೂ ಹಿಂದುಳಿದಿದ್ದೇವೆ. “ಮೊಗೇರ ಅಭಿವೃದ್ಧಿ ನಿಗಮ” ಬೇಡಿಕೆಯನ್ನು ಅಧಿವೇಶನದ ಮೊದಲೇ ಇಡಬೇಕಿತ್ತು. ಆರ್ಥಿಕ ಬಜೆಟ್ ಮಂಡನೆ ಮಾಡುವ ಮೊದಲು ರಾಜ್ಯ ಮೊಗೇರ ಸಂಘದ ಸಹಯೋಗದೊಂದಿಗೆ ಬೆಂಗಳೂರಿಗೆ ನಿಯೋಗ ತೆರಳುವ ಅಗತ್ಯವಿದೆ ಎಂದರು.

ಮೊಗೇರ ಸಮುದಾಯಕ್ಕೆ ಕೊಡಗಿನಲ್ಲಿ ಸಮುದಾಯ ಭವನ ನಿರ್ಮಿಸಲು ಸ್ಥಳ ಹಾಗೂ ಕಟ್ಟಡದ ಬೇಡಿಕೆಯನ್ನು ಈಗಾಗಲೇ ಸಲ್ಲಿಸಲಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಶೀಘ್ರದಲ್ಲಿ ಸುಮಾರು ೩ ರಿಂದ ೪ ಸಾವಿರ ಮೊಗೇರ ಬಾಂಧವರನ್ನು ಸೇರಿಸಿ ಸಮಾವೇಶ ನಡೆಸುವ ಮೂಲಕ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಸಮಾಜದ ಸ್ಥಾಪಕಾಧ್ಯಕ್ಷ ಸದಾನಂದ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಸೌಲಭ್ಯಗಳನ್ನು ತಮ್ಮ ಕ್ಷೇತ್ರಗಳ ಜನಸಾಮಾನ್ಯರಿಗೆ ಒದಗಿಸಿಕೊಡಲು ಪ್ರಯತ್ನಿಸಬೇಕು. ಮಾದರಿ ಜನಪ್ರತಿನಿಧಿಗಳಾಗಿ ಹೊರ ಹೊಮ್ಮುವ ಮೂಲಕ ಮುಂದೆ ರಾಜಕೀಯದಲ್ಲಿ ಉನ್ನತ ಸ್ಥಾನ ಸಿಗಲಿ ಎಂದು ಹಾರೈಸಿದರು.

ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮೊಗೇರ ಸಮಾಜವನ್ನು ಸಂಘಟಿಸಿ ಎಲ್ಲಾ ರಂಗದಲ್ಲೂ ಮುಖ್ಯವಾಹಿನಿಗೆ ಕರೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ತಿಳಿಸಿದರು.

ಸಮಾಜದ ರಾಜ್ಯ ಉಪಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ತೀರಾ ಹಿಂದುಳಿದಿರುವ ಮೊಗೇರ ಸಮಾಜಕ್ಕೆ ಅಭಿವೃದ್ಧಿ ನಿಗಮದ ಅವಶ್ಯಕತೆ ಇದ್ದು, ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕಾಗಿದೆ ಎಂದರು.

ಸಮಾಜದ ಗೌರವಾಧ್ಯಕ್ಷ ಹಾಗೂ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ಮಾತನಾಡಿ ಮೊಗೇರ ಸಮಾಜದ ಸದಸ್ಯತ್ವ ಆಂದೋಲನ ಆರಂಭಿಸಬೇಕು. ಪ್ರತಿ ಗ್ರಾಮದಲ್ಲೂ ಸಮಿತಿಗಳನ್ನು ರಚಿಸಿ ಸಂಘಟನೆ ಬಲ ಪಡಿಸಬೇಕು ಎಂದು ಕರೆ ನೀಡಿದರು. ಪೂರ್ವಿಕರು ಉಳಿಸಿ ಬೆಳೆಸಿರುವ ಭಾಷೆ, ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆ ತಿಳಿಯುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು, ಮದೆನಾಡು ಗ್ರಾ.ಪಂ ಉಪಾಧ್ಯಕ್ಷೆ ಚಂದ್ರವತಿ, ನೇರುಗಳಲೆ ಗ್ರಾ.ಪಂ ಸದಸ್ಯೆ ಅಶ್ವಿನಿ ಕೃಷ್ಣ, ಬೇಳೂರು ಪಂಚಾಯಿತಿ ಸುಧಾ ಗಣೇಶ್, ಮಂಜಿಕೆರೆ ನಾಕೂರು ಶಿರಂಗಲ ಪ್ರೇಮ, ಹರದೂರು ಪಂಚಾಯತ್ ಕುಸುಮ ಪೂವಪ್ಪ, ಕಂಬಿಬಾಣೆ ಪಂಚಾಯಿತಿ ರಾಧ ವಿಠಲ, ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ, ವಾಲುನೂರು ತ್ಯಾಗತ್ತೂರು ಪಂ. ಗಣೇಶ್, ಕಡಗದಾಳು ಪಂಚಾಯತ್ ಗೀತಾ ಬಾಲಕೃಷ್ಣ, ಹೆಬ್ಬೆಟ್ಟಗೇರಿ ಪಂಚಾಯತ್ ರಘು, ಹೊಸ್ಕೆರಿ ಪಂಚಾಯತ್ ಜನಾರ್ಧನ್, ೨ನೇ ಮೊಣ್ಣಂಗೇರಿ ಪಂಚಾಯತ್ ಜಾನಕಿ, ಕಾಕೋಟುಪರಂಬು ಪಂಚಾಯತ್ ಯೋಗೀಶ್, ಸಿದ್ದಾಪುರ ಪಂಚಾಯತ್ ಗುರುವಪ್ಪ, ರಾಮನಗರ ಪಂಚಾಯತ್ ಗೀತಾ ವಸಂತ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಘು ಹಾಗೂ ಕೋವಿಡ್ ವಾರಿಯರ್ಸ್ ಮೂರ್ನಾಡಿನ ಕಿಟ್ಟು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೋಮವಾರಪೇಟೆ ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಸಮಾಜದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಎಂ. ದಾಮೋದರ, ಚೆಟ್ಟಳ್ಳಿ ಪಂಚಾಯಿತಿ ಅಧ್ಯಕ್ಷ ಹಾಗೂ ಕುಶಾಲನಗರ ಮೊಗೇರ ಸಮಾಜದ ಅಧ್ಯಕ್ಷ ಮುತ್ತಪ್ಪ, ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಬಿ.ಸುರೇಶ್ ಹಾಗೂ ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಬಿ. ವಸಂತ ಹಾಜರಿದ್ದರು.

ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಜನಾರ್ಧನ್ ನಿರೂಪಿಸಿ, ವಿವೇಕ್ ಸ್ವಾಗತಿಸಿ, ಪಿ.ಎಂ.ರವಿ ವಂದಿಸಿದರು.