ನಾಪೋಕ್ಲು, ಮಾ. ೨: ಶಿವರಾತ್ರಿ ಉತ್ಸವದ ಅಂಗವಾಗಿ ಕಾವೇರಿ ಬೈವಾಡ್ ಸಮಿತಿಯಿಂದ ತಲಕಾವೇರಿಗೆ ಇರುಮುಡಿ ಯಾತ್ರೆಯನ್ನು ಕೈಗೊಳ್ಳಲಾಯಿತು. ಕಳೆದ ೩೪ ವರ್ಷಗಳಿಂದ ಕಾವೇರಿ ಬೈವಾಡ್ ಸಮಿತಿಯ ವತಿಯಿಂದ ಕೊಡಗಿನ ಪವಿತ್ರ ಕಾವೇರಿ ಮಾತೆಯ ತಲಕಾವೇರಿ ಕ್ಷೇತ್ರಕ್ಕೆ ಇರುಮುಡಿ ಯಾತ್ರೆ ತೆರಳುವ ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು. ವೃತಧಾರಿಗಳು ಶ್ರದ್ಧಾಭಕ್ತಿಯಿಂದ ೪೮ ದಿನಗಳ ಕಾಲ ವೃತ ಅಚರಿಸಿದರು. ಮಹಾ ಶಿವರಾತ್ರಿ ದಿನದಂದು ವಿವಿಧ ಕಡೆಗಳಿಂದ ಹಲವು ವೃತಧಾರಿಗಳು ಪಾರಾಣೆಯ ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ ಅವರ ಮನೆಯಲ್ಲಿ ಸೋಮವಾರ ಕಾವೇರಿ ಬೈವಾಡ್‌ಗೆ ಇರುಮುಡಿ ಕಟ್ಟು ತುಂಬಿಸಿ ಬೆಳಗ್ಗಿನ ಜಾವ ಕಟ್ಟನ್ನು ಹೊತ್ತು ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳಿ ಬಳಿಕ ಭಾಗಮಂಡಲಕ್ಕೆ ಬಂದು ಅಲ್ಲಿ ಪುಣ್ಯ ಸ್ನಾನವನ್ನು ಮಾಡಿ ಶ್ರೀ ಭಗಂಡೇಶ್ವರನಿಗೆ ಪೂಜೆಯನ್ನು ಸಲ್ಲಿಸಿ ಪತ್ತಾಯಕ್ಕೆ ಅಕ್ಕಿ ಹಾಕಿದರು. ಮಹಾ ಮಂಗಳಾರತಿ ಪ್ರಸಾದ ಸ್ವೀಕರಿಸಿ ನಂತರ ಕಾವೇರಿ ಮಾತೆಯ ಸನ್ನಿಧಿ ತಲಕಾವೇರಿಗೆ ತೆರಳಿದರು. ಅಲ್ಲಿ ದೇವರಿಗೆ ನೈವೇಧ್ಯ ಅರ್ಪಿಸಿ ಕಟ್ಟನ್ನು ಸಡಿಲಿಸಲಾಯಿತು. ಬಳಿಕ ಶಿವನ ಧ್ಯಾನದಲ್ಲಿ ಭಕ್ತಿಯಿಂದ ಪ್ರಸಾದ ಸ್ವೀಕರಿಸಿ ಹಿಂತಿರುಗಿದರು. ಈ ಸಂದರ್ಭ ಕಾವೇರಿ ಬೈವಾಡ್ ಸಮಿತಿಯ ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ, ಬೊಟ್ಟೋಳಂಡ ಗಣೇಶ್, ಕಂಗಾAಡ ಭೀಮಯ್ಯ, ಕೇಲೇಟಿರ ನಾಣಯ್ಯ, ಅಮ್ಮಂಡ ಮೇದುಮಯ್ಯ, ಬಾಳೆಯಡ ರಾಜೇಶ್ ಮತ್ತಿತರರು ಇದ್ದರು. -ದುಗ್ಗಳ