ಚೆಟ್ಟಳ್ಳಿ, ಮಾ. ೨: ಚೆಟ್ಟಳ್ಳಿ ಶ್ರೀಭಗವತಿ ವಾರ್ಷಿಕ ಉತ್ಸವವು ತಾ. ೪ ರಿಂದ ೬ರವರೆಗೆ ನಡೆಯಲಿದೆ ಎಂದು ದೇವಾಲಯ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.

ತಾ. ೩ರಂದು ಬೆಳಿಗ್ಗೆ ಕೊಂಬಾಟ್, ೪ರಂದು ಪಟ್ಟಣಿಹಬ್ಬ, ಅಯ್ಯಪ್ಪ ಬನಕ್ಕೆ ಹೋಗುವುದು. ಕೊಂಗೇಟಿರ ಐನ್‌ಮನೆಯಿಂದ ತಕ್ಕರಾದ ಕೊಂಗೇಟಿರ ಹರೀಶ್‌ಅಪ್ಪಣ್ಣ ಅವರನ್ನು ದುಡಿಕೊಟ್ಟ್ ಹಾಡು ಒಡ್ಡೋಲಗ ದೊಂದಿಗೆ ದೇವಾಲಯಕ್ಕೆ ಕರೆತಂದು ಮನೆಯಿಂದ ದೇವಭಂಡಾರವನ್ನು ದೇವತಕ್ಕರಾದ ಚೇರಳ ತಮ್ಮಂಡ ಆನಂದರವರ ಮನೆಯಿಂದ ಊರಿನವರು ದುಡಿಕೊಟ್ ಒಡ್ಡೋಲಗ ದೊಂದಿಗೆ ದೇವಾಲಯಕ್ಕೆ ಕರೆತರುವರು. ಪೂಜಾ ಕೈಂಕರ್ಯ ನಡೆದ ನಂತರ ಕೊಂಬಾಟ್ ನೃತ್ಯ, ತೀರ್ಥ ವಿತರಣೆ ನಡೆದು ದೇವಭಂಡಾರವನ್ನು ದೇವತಕ್ಕರ ಮನೆಗೆ ಒಪ್ಪಿಸುವರು. ಮಾರ್ಚ್೫ರ ಶನಿವಾರ ಅಯ್ಯಪ್ಪ ಬನದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ತಕ್ಕಮುಖ್ಯಸ್ಥರು ಊರಿನವರ ಸಮ್ಮುಖದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಕಟ್ಟು ಮುರಿವರು ನಂತರ ಕೊಂಬಾಟ್ ಪಾಯಸ ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೬ರಂದು ದೊಡ್ಡ ಹಬ್ಬ ವಾಗಿದ್ದು ಕೊಂಗೇಟಿರ ಐನ್‌ಮನೆ ಯಿಂದ ಒಡ್ಡೋಲ ಗದೊಂದಿಗೆ ತಕ್ಕರನ್ನು ಕರೆತಂದು ಊರಿನವರು ನೆಂಟರಿಷ್ಟರೆಲ್ಲ ಸೇರಿ ಭಂಡಾರ ಮನೆಗೆ ತೆರಳಿ ದೇವತಕ್ಕರ ಸಮ್ಮುಖದಲ್ಲಿ ದೇವಭಂಡಾರವನ್ನು ತಂದು ದೇವಿಗೆ ಮಂಗಳಾರತಿ ವಿಶೇಷ ಪೂಜೆಸಲ್ಲಿಸಿ ತೆಂಗಿನಕಾಯಿ ಎಳೆಯುವುದು, ಜಿಂಕೆ ಕೊಂಬಿನ ೧೮ ತರಹದ ಕೊಂಬಾಟ್ ನೃತ್ಯ, ಭಂಡಾರ ಅರ್ಪಿಸುವುದು, ಊಟೋಪಚಾರ. ಸಂಜೆ ೬ಕ್ಕೆ ಬೊಳಕ್ ಮರವನ್ನು ಇಳಿಸಿ ಶುದ್ಧ ಕಳಸ ಪೂಜೆ ಮಾಡಿ ದೇವಭಂಡಾರವನ್ನು ದೇವತಕ್ಕರ ಭಂಡಾರ ಮನೆಗೆ ಒಪ್ಪಿಸಲಾಗುವುದೆಂದು ದೇವತಕ್ಕರಾದ ಚೇರಳತಮ್ಮಂಡ ಆನಂದ ಹಾಗೂ ತಕ್ಕರಾದ ಕೊಂಗೇಟಿರ ಹರೀಶ್‌ಅಪ್ಪಣ್ಣ ತಿಳಿಸಿದ್ದಾರೆ.

-ಕರುಣ್‌ಕಾಳಯ್ಯ