ಸೋಮವಾರಪೇಟೆ, ಮಾ. ೩: ಹವಾಮಾನ ವೈಪರೀತ್ಯ, ಅಂತರ್ಜಲ ಮಟ್ಟ ಕುಸಿತ, ನೀರಾವರಿಗೆ ಸಮಸ್ಯೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಕೆರೆಕಟ್ಟೆಗಳ ರಕ್ಷಣೆ ಆಗಲೇಬೇಕಿದೆ. ಮಳೆಗಾಲದಲ್ಲಿ ಕೆರೆಗಳು ಕೋಡಿ ಹರಿದರೂ ಬೇಸಿಗೆಯಲ್ಲಿ ಮಾತ್ರ ಬತ್ತಿ ಹೋಗುತ್ತಿರುವುದು ವಾಸ್ತವ. ಅಂತರ್ಜಲ ಮಟ್ಟ ಕುಸಿತದಿಂದಾಗಿ ಕುಡಿಯುವ ನೀರಿನೊಂದಿಗೆ ಕೃಷಿ ಚಟುವಟಿಕೆಗಳಿಗೂ ನೀರಿನ ಅಭಾವ ತಲೆದೋರುತ್ತಿದೆ. ಈ ನಡುವೆ ಸರ್ಕಾರಿ ಕೆರೆಗಳನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡು ಮನೆ, ತೋಟ, ಗದ್ದೆಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇಂತಹ ಒತ್ತುವರಿ ತೆರವುಗೊಳಿಸುವ ಸವಾಲನ್ನು ಕಂದಾಯ ಇಲಾಖೆ ಬೆನ್ನಟ್ಟಿದೆ.

ಸರ್ಕಾರದ ದಾಖಲೆಗಳ ಪ್ರಕಾರ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೨೦೮ ಸರ್ಕಾರಿ ಕೆರೆಗಳಿದ್ದು, ೨೪೫.೧೫ ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ ೧೦೭ ಕೆರೆಗಳ ೯೨.೭೧ ಎಕರೆ ಒತ್ತುವರಿಯಾಗಿವೆ. ಈ ಮಧ್ಯೆ ತಾಲೂಕಿನ ೯ ಗ್ರಾಮಗಳಲ್ಲಿದ್ದ ಸರ್ಕಾರಿ ಕೆರೆಗಳು ಸಂಪೂರ್ಣ ಗುಳುಂ ಆಗಿದ್ದು, ಈ ಸ್ಥಳಗಳಲ್ಲಿ ಕೆರೆಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗದಂತಾಗಿವೆ! ಸಮಾಧಾನದ ಅಂಶವೆAದರೆ ತಾಲೂಕಿನಲ್ಲಿ ೧೦೧ ಸರ್ಕಾರಿ ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ.

ರಾಜ್ಯಾದ್ಯಂತ ಸರ್ಕಾರಿ ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಸರ್ಕಾರಿ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ಅಧಿಕಾರ ನೀಡಲಾಗಿದೆ. ಅದರಂತೆ ಲೋಕಾಯುಕ್ತದ ಅಧಿಕಾರಿಗಳು ರಾಜ್ಯಾದ್ಯಂತ ಕೆರೆಗಳ ಸರ್ವೆ, ಒತ್ತುವರಿಯಾಗಿರುವ ವಿವರ, ತೆರವು ಕಾರ್ಯಾಚರಣೆಯ ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆ ಆಯಾ ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿಕೊಂಡು ಕೆರೆಗಳ ಉಳಿವಿಗೆ ಶ್ರಮ ವಹಿಸಲಾಗುತ್ತಿದ್ದು, ಪ್ರತಿನಿತ್ಯ ಲೋಕಾಯುಕ್ತಕ್ಕೆ ವರದಿ ನೀಡುತ್ತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಒಟ್ಟು ಇರುವ ಸರ್ಕಾರಿ ಕೆರೆಗಳು, ಇವುಗಳಲ್ಲಿ ಒತ್ತುವರಿಯಾಗಿರುವ ಕೆರೆಗಳ ಸಂಖ್ಯೆ, ವಿಸ್ತೀರ್ಣ, ತೆರವು ಕಾರ್ಯಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಭಾವಚಿತ್ರ ಸಹಿತ ಲೋಕಾಯುಕ್ತದ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಒದಗಿಸಲಾಗುತ್ತಿದೆ.

ತಾಲೂಕಿನಲ್ಲಿ ೧೦೭ ಕೆರೆಗಳು ಒತ್ತುವರಿಯಾಗಿದ್ದು, ಇದರಲ್ಲಿ ೪೬ ಕೆರೆಗಳ ಸರ್ವೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇನ್ನೂ ೬೧ ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಉಳಿದಿದೆ. ಈ ಕೆರೆಗಳ ಪೈಕಿ ೪೨ಕೆರೆಗಳನ್ನು ಸರ್ವೆ ಮಾಡಲಾಗಿದೆ. ೧೯ ಕೆರೆಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ.

ತಾಲೂಕು ತಹಶೀಲ್ದಾರ್ ನೇತೃತ್ವದ ತಂಡವು ಕೆರೆಗಳ ಸರ್ವೆ ಕಾರ್ಯ ನಡೆಸುತ್ತಿದ್ದು, ಒತ್ತುವರಿಯಾಗಿರುವ ಪ್ರಕರಣಗಳಲ್ಲಿ ಯಾವುದೇ ಮುಲಾಜಿಗೆ ಒಳಗಾಗದೇ ತೆರವು ಮಾಡುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದಗಳು ನಡೆಯುತ್ತಿದ್ದರೂ, ಇದಕ್ಕೆ ಹೆಚ್ಚಿನ ಮಹತ್ವ ನೀಡದೇ ಅಧಿಕಾರಿಗಳು ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ.

ಬಹುತೇಕ ಕೆರೆಗಳ ಒತ್ತುವರಿ ತೆರವು ಸಂದರ್ಭ ಸ್ಥಳೀಯರು, ಅಧಿಕಾರಿ ವರ್ಗವನ್ನು ಗೋಗರೆಯುತ್ತಿದ್ದಾರೆ. ಕೆರೆಗಳಿದ್ದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಕೊಂಡಿರುವವರ ಬದುಕು ಅತಂತ್ರವಾಗುತ್ತಿದ್ದು, ಬಾಡಿಗೆ ಮನೆಗಳಿಗೆ ತೆರಳುತ್ತಿದ್ದಾರೆ. ಇನ್ನು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ತೋಟ, ಗದ್ದೆ ಕೃಷಿ ನಡೆಸುತ್ತಿರುವವರು ಸರ್ಕಾರದ ಆದೇಶವನ್ನು ಪಾಲಿಸಲೇಬೇಕಿದ್ದು, ಒತ್ತುವರಿಯನ್ನು ಅನಿವಾರ್ಯವಾಗಿ ಬಿಟ್ಟುಕೊಡಬೇಕಿದೆ.

(ಮೊದಲ ಪುಟದಿಂದ) ಹೀಗೆ ಒತ್ತುವರಿಯನ್ನು ತೆರವುಗೊಳಿಸಿದ ನಂತರ ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಒಮ್ಮೆ ತೆರವುಗೊಂಡ ಕೆರೆಗಳನ್ನು ಮತ್ತೆ ಸರ್ಕಾರದ ವಶದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಲಾಗಿದೆ.

ತಾಲೂಕು ತಹಶೀಲ್ದಾರ್ ನೇತೃತ್ವದ ತಂಡದಲ್ಲಿ ಸರ್ವೆಯರ್, ಕಂದಾಯ ಪರಿವೀಕ್ಷಕರು, ಉಪ ತಹಶೀಲ್ದಾರ್, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಭೂ ಮಾಪಕರು, ಪೊಲೀಸ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿದ್ದು, ತೆರವು ಸಂದರ್ಭ ಎಲ್ಲರೂ ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕೆಂಬ ಆದೇಶ ನೀಡಲಾಗಿದೆ.

೯ ಕೆರೆಗಳು ಸಂಪೂರ್ಣ ಗುಳುಂ: ತಾಲೂಕಿನಲ್ಲಿ ೯ ಕೆರೆಗಳು ಸಂಪೂರ್ಣ ಒತ್ತುವರಿಯಾಗಿದ್ದು, ದಾಖಲೆ ಗಳಲ್ಲಿರುವ ಕೆರೆಗಳು ವಾಸ್ತವದಲ್ಲಿ ಇಲ್ಲವಾಗಿದೆ. ತಾಲೂಕಿನ ಸೋಮವಾರಪೇಟೆ ಕಸಬಾ ಹೋಬಳಿಗೆ ಸಂಬAಧಿಸಿದAತೆ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೀಡು ಗ್ರಾಮದ ಸ.ನಂ.೯೫ರಲ್ಲಿರುವ ೦.೦೮ ಎಕರೆ, ಕಲ್ಕಂದೂರು ಗ್ರಾಮದ ಸ.ನಂ. ೫೬ರ ೦.೮೩ ಎಕರೆ ಕೆರೆ ಜಾಗ ಸಂಪೂರ್ಣ ಒತ್ತುವರಿಯಾಗಿದೆ. ಇದರೊಂದಿಗೆ ನೇರುಗಳಲೆ ಗ್ರಾ.ಪಂ.ನ ೩೩/೧ರಲ್ಲಿರುವ ೫.೭೩ ಏಕರೆ, ಯಡುಂಡೆ ಗ್ರಾಮದ ಸ.ನಂ. ೨೫ರ ೦.೯೭ ಎಕರೆ, ಇದೇ ಗ್ರಾಮದ ಸ.ನಂ. ೩೨ರ ೦.೧೪ ಎಕರೆ ಕೆರೆ ಜಾಗ ಸಂಪೂರ್ಣ ಗುಳುಂ ಆಗಿದೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕೂತಿ ಗ್ರಾಮದ ಸ.ನಂ. ೫೦೧/೧ರ ೦.೨೫ ಎಕರೆ, ತಲ್ತರೆಶೆಟ್ಟಳ್ಳಿಯ ಸ.ನಂ.೨೭ರ ೦.೧೯ ಎಕರೆ, ಚಿಕ್ಕತೋಳೂರಿನ ೧೬೬/೨ರಲ್ಲಿರುವ ೦.೧೬ ಎಕರೆ, ಕುಂದಳ್ಳಿ ಗ್ರಾಮದ ಸ.ನಂ. ೨೧/೧೩ರ ೦.೨೫ ಎಕರೆ ಕೆರೆ ಜಾಗವು ಸಂಪೂರ್ಣ ಒತ್ತುವರಿಯಾಗಿರುವ ಬಗ್ಗೆ ಭೂ ಮಾಪನ ಇಲಾಖೆಯಿಂದ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ.

ಸರ್ಕಾರಿ ಕೆರೆಗಳು ಒತ್ತುವರಿ ಯಾಗಿರುವ ಪ್ರಕರಣಗಳನ್ನು ಪತ್ತೆಹಚ್ಚುವ ಹಾಗೂ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದ್ದು, ತಕ್ಷಣಕ್ಕೆ ೧೯ ಕೆರೆಗಳ ಒತ್ತುವರಿ ತೆರವಿಗೆ ಕಂದಾಯ ಇಲಾಖೆ ದಿನಾಂಕ ನಿಗದಿಗೊಳಿಸಿದೆ. ತಾ. ೨೮ ಹಾಗೂ ಮಾರ್ಚ್ ೩ರಂದು ಕಲ್ಕಂದೂರು, ಮಾರ್ಚ್ ೯ರಂದು ಭುವಂಗಾಲ, ೭ರಂದು ಹೊಸಬೀಡು, ಮಾರ್ಚ್ ೪ರಂದು ಯಡುಂಡೆ, ಯಲಕನೂರು, ೫ರಂದು ಕುಂದಳ್ಳಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ.

ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಸರ್ವೆಯಿಂದ ಖಾತ್ರಿಯಾಗಿದ್ದು, ಇವುಗಳನ್ನು ತೆರವುಗೊಳಿಸಿ ಸರ್ಕಾರಿ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಂದಾಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ಇಲಾಖೆಯ ಕಾರ್ಯತತ್ಪರತೆಯ ಮೇಲೆ ಲೋಕಾಯುಕ್ತವೂ ಹದ್ದಿನ ಕಣ್ಣಿಟ್ಟಿದ್ದು, ತೆರವು ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಿದೆ. - ವಿಜಯ್ ಹಾನಗಲ್