ಪೊನ್ನಂಪೇಟೆ, ಮಾ. ೩: ಮೈಸೂರು ರಂಗಾಯಣ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿಯಲ್ಲಿ ಕನ್ನಡ ನಾಟಕ ಎಂಬ ಹೆಸರಿನಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷ್ಣೇಗೌಡನ ಆನೆ ಎಂಬ ಸಾಮಾಜಿಕ ನಾಟಕ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಪೂರ್ಣಚಂದ್ರ ತೇಜಸ್ವಿ ಅವರ ಪ್ರಮುಖ ಕತೆಗಳಲ್ಲಿ ಒಂದಾಗಿರುವ ಕೃಷ್ಣೇಗೌಡನ ಆನೆ ನಾಟಕವನ್ನು ಆರ್. ನಾಗೇಶ್ ನಿರ್ದೇಶನದಲ್ಲಿ ರಂಗಾಯಣದ ಕಿರಿಯ ರೆಪರ್ಟರಿ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ೧ ಗಂಟೆ ೪೫ ನಿಮಿಷ ಕಾಲ ನಡೆದ ನಾಟಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ನಾಟಕದ ಕಥಾಹಂದರ

ಮಠವೊAದರಲ್ಲಿ ಇದ್ದ ಗೌರಿ ಎಂಬ ಆನೆಯನ್ನು ಕೃಷ್ಣೇಗೌಡ ಎಂಬುವನು ಖರೀದಿಸುತ್ತಾನೆ. ಆನೆಯನ್ನು ಬಳಸಿಕೊಂಡು ಹಣ ಸಂಪಾದಿಸಲು ಶುರುಮಾಡುತ್ತಾನೆ. ಮುಂದೆ ಆ ಊರಲ್ಲಿ ಯಾವುದೇ ದುರಂತ ನಡೆದರೂ ಕೃಷ್ಣೇಗೌಡನ ಆನೆಯನ್ನು ಬೊಟ್ಟು ಮಾಡುವುದು ಸಾಮಾನ್ಯವಾಗಿ ಬಿಡುತ್ತದೆ. ವಿದ್ಯುತ್ ತಂತಿ ಮುರಿದು ಕರೆಂಟ್ ಕೈಕೊಟ್ಟಾಗ, ಟೆಲಿಫೋನ್ ರಿಪೇರಿ ಮಾಡುತ್ತಿದ್ದ ಸಿಬ್ಬಂದಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಾಗ, ರಾತ್ರಿ ಮರ ಸಾಗಿಸುವ ಲಾರಿಯೊಂದು ಅಪಘಾತಗೊಂಡು ಚಾಲಕ ಮೃತಪಟ್ಟಾಗ, ಅಂಗಡಿ ಯೊಂದು ಯಾರದೋ ಕಿಡಿಗೇಡಿತನಕ್ಕೆ ಹಾನಿಗೊಂಡಾಗ ಮೂಕಪ್ರಾಣಿ ಆನೆಯ ಮೇಲೆ ಆಪಾದನೆ ಹೊರಿಸಲಾಗುತ್ತದೆ. ಹೀಗೆ ಸಹಜ ಪಾತ್ರಗಳೊಂದಿಗೆ ‘ಕೃಷ್ಣೇಗೌಡನ ಆನೆ’ ಎನ್ನುವ ನಾಟಕ ಸಾಗುತ್ತದೆ. ಇದ್ದಕ್ಕಿದ್ದಂತೆ ಕೃಷ್ಣೇಗೌಡನ ಆನೆ ನಾಪತ್ತೆಯಾಗುವುದರೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ. ಆನೆಯಷ್ಟೇ ಸಹಜವಾಗಿ ಬದುಕುವ ಮಾವುತ ವೇಲಾಯುಧನ ದುರಂತವೂ ಇಲ್ಲಿ ಮನುಕುಲದ ದುರಂತ ಹೇಳುತ್ತದೆ. ಆನೆ ಮತ್ತು ವೇಲಾಯುಧನ ಪಾತ್ರ ಸಹಜ ಬದುಕಿನ ತಲ್ಲಣ ಚಿತ್ರಿಸುತ್ತದೆ. ಮನುಕುಲದ ಎಲ್ಲ ದುರಂತ ಮಾನವ ನಿರ್ಮಿತವಾದರೂ, ಅದನ್ನು ಒಪ್ಪಿಕೊಳ್ಳಲಾಗದ ಮನೋಸ್ಥಿತಿ, ದುರಹಂಕಾರ, ಕೊನೆಗೊಂದು ದಿನ ಮಾನವ ಕುಲವನ್ನೇ ಅಂತ್ಯಗೊಳಿಸುತ್ತದೆ ಎನ್ನುವ ಸಂದೇಶ ಸಾರುವ ಈ ಕತೆ ಸಮಾಜದ ಅಂಕುಡೊAಕುಗಳನ್ನು ಸಹಜತೆಗೆ ಹತ್ತಿರವಾಗಿ ಚಿತ್ರಿಸಲಾದ ಬಗೆ ಮೆಚ್ಚುಗೆಯಾಗುತ್ತದೆ.

ಉದ್ಘಾಟನೆ

ಶಾಸಕ ಕೆ.ಜಿ. ಬೋಪಯ್ಯ ಅವರು ನಗಾರಿ ಬಾರಿಸುವ ಮೂಲಕ ನಾಟಕವನ್ನು ಉದ್ಘಾಟಿಸಿ ಮಾತನಾಡಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ಮೂಡಿಸಲು ರಂಗಭೂಮಿ ಪ್ರದರ್ಶನ ಹೆಚ್ಚು ಪರಿಣಾಮಕಾರಿ ಮಾಧ್ಯಮ. ಮುಂದಿನ ದಿನಗಳಲ್ಲಿ ಪೊನ್ನಂಪೇಟೆಯಲ್ಲಿ ರಂಗ ಮಂದಿರ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಡಾ. ಬಿ.ವಿ. ಕಾರಂತರಿAದ ೩೨ ವರ್ಷಗಳ ಹಿಂದೆ ಮೈಸೂರಿನಲ್ಲಿ ಸ್ಥಾಪನೆಗೊಂಡ ರಂಗಾಯಣ ರಂಗಭೂಮಿ, ನಾಟಕ ಸಂಸ್ಕೃತಿಯನ್ನು ಎಲ್ಲಾ ಕಡೆಗಳಿಗೂ ಪಸರಿಸುತ್ತಿದೆ. ಎಂದರು. ಈ ಸಂದರ್ಭ ಕರ್ನಾಟಕ ಪಬ್ಲಿಕ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎಸ್. ಕುಶಾಲಪ್ಪ, ಮುಖ್ಯಶಿಕ್ಷಕ ಬಿ.ಎಂ. ವಿಜಯ್ ಹಾಜರಿದ್ದರು. ಚಂದನ್ ಪ್ರಾರ್ಥಿಸಿ, ನಾಟಕ ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ ಸ್ವಾಗತಿಸಿದರು. ಶಿಕ್ಷಕ ಮಹೇಶ್ ನಿರೂಪಿಸಿ ವಂದಿಸಿದರು.

- ಚನ್ನನಾಯಕ