ಕೂಡಿಗೆ, ಮಾ. ೩: ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜು ಜಾಗದ ಹಕ್ಕುಪತ್ರವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮತ್ತು ಪ್ರಾಂಶುಪಾಲರಿಗೆ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಸರಕಾರದ ನಿಯಮಾನುಸಾರವಾಗಿ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆ ಮತ್ತು ಕಾಲೇಜುಗಳ ದಾಖಲೆಗೆ ಅನುಗುಣವಾಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಲು ಈಗಾಗಲೇ ಜಿಲ್ಲಾಡಳಿತ ಸಿದ್ಧವಾಗಿದೆ. ಅದರಂತೆ ಕೂಡಿಗೆ ಪದವಿಪೂರ್ವ ಕಾಲೇಜಿನ ಜಾಗದ ಹಕ್ಕುಪತ್ರವನ್ನು ವಿತರಣೆ ಮಾಡಲಾಗಿದೆ ಎಂದರು.

ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಎಪಿಸಿಎಂಎಸ್ ಅಧ್ಯಕ್ಷ ಕೊಮರಪ್ಪ, ಕೂಡಿಗೆ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜ ಶೆಟ್ಟಿ, ಪ್ರಾಂಶುಪಾಲ ಡಾ. ಬಸಪ್ಪ, ಉಪನ್ಯಾಸಕ ನಾಗಪ್ಪ ಸೇರಿದಂತೆ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.