ಸುಂಟಿಕೊಪ್ಪ, ಮಾ.೨: ಆಸ್ತಿ ವಿಚಾರ ಭುಗಿಲೆದ್ದ ಪರಿಣಾಮ ಕ್ರೋಧಗೊಂಡ ವ್ಯಕ್ತಿಯೋರ್ವ ತನ್ನ ಚಿಕ್ಕಪ್ಪನ ಮಗನನ್ನೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ನಡೆದಿದೆ.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಅಂದಗೋವೆ ಗ್ರಾಮದ ನಿವೃತ್ತ ಕೆಎಸ್‌ಆರ್‌ಪಿ ಎಸ್.ಐ.ಮಾಂಕು ಅವರ ಮಗ ಶಿವಕುಮಾರ್ (೩೮) ತನ್ನ ಚಿಕ್ಕಪ್ಪನ ಮಗ ಧರ್ಮಪ್ಪ (೫೩) ಅವರನ್ನು ಡಬಲ್ ಬ್ಯಾರಲ್ ಕೋವಿಯಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಮಾಂಕು ಸಹೋದರ ದಿ. ಗುರುವಪ್ಪ ಅವರ ಪುತ್ರ ಧರ್ಮಪ್ಪ ಕಲ್ಲೂರು ಗ್ರಾಮದಲ್ಲಿ ನೆಲೆಸಿದ್ದರು. ಇವರ ಪಾಲಿಗೆ ೫ ಎಕರೆ ತೋಟವಿದ್ದು ಪಾಲುದಾರಿಕೆ ವಿಚಾರದಲ್ಲಿ ಆಗಾಗ್ಗೆ ಮಾತುಕತೆ ನಡೆಯಿತು. ತಾ.೧ ರಂದು ರಾತ್ರಿ ೨ ಕುಟುಂಬದವರು ಅನ್ಯೋನ್ಯವಾಗಿ ಚರ್ಚಿಸಿ ಒಂದು ಇತ್ಯರ್ಥಕ್ಕೆ ಬಂದಿದ್ದರು ಎನ್ನಲಾಗಿದೆ. ತೋಟದ ಕರಿಮೆಣಸು ಕೊಯ್ಯುವ ಈ ಸಂದರ್ಭದಲ್ಲಿ ತಮಗೆ ಹೆಚ್ಚು ಭಾಗ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಶಿವಕುಮಾರ್ ಅವರು ತಾ. ೨ ರಂದು ಬೆಳಿಗ್ಗೆ ೯ ಗಂಟೆಗೆ ಧರ್ಮಪ್ಪ ಅವರು ಕರಿಮೆಣಸು ಕುಯ್ಯಲು ತೆರಳುತ್ತಿದ್ದಾಗ ಏಕಾಏಕಿ ತನ್ನ ತಂದೆ ಮಾಂಕು ಅವರ ಸ್ವಾಧೀನದಲ್ಲಿದ್ದ ಡಬಲ್ ಬ್ಯಾರಲ್ ಕೋವಿಯಿಂದ ತನ್ನ ಮನೆಯ ಕಿಟಕಿಯಿಂದ ಧರ್ಮಪ್ಪ ಅವರ ಪಕ್ಕೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಕರಿಮೆಣಸು ಕುಯ್ಯಲು ತೆರಳುತ್ತಿದ್ದ ಧರ್ಮಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಂಜು ಹಾಗೂ ಸಿಬ್ಬಂದಿ ತೆರಳಿದ್ದು ಸ್ಥಳ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಕುಶಾಲನಗರ ಉಪ ಅಧೀಕ್ಷಕರಾದ ಎಚ್.ಎಂ.ಶೈಲೆAದ್ರ, ವೃತ್ತ ನಿರೀಕ್ಷರಾದ ಮಹೇಶ್ ಅವರ ಸಮುಖದಲ್ಲಿ ಮಹಜರು ನಡೆಸಿ ಕೊಲೆ ಹತ್ಯೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿವಕುಮಾರ್‌ನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.