ಮಡಿಕೇರಿ, ಮಾ. ೨: ಕೊಡವ ಜನಾಂಗದ ಸಮಗ್ರ ಶ್ರೇಯೋಭಿವೃದ್ಧಿಗೆ ನೂತನವಾಗಿ ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಪ್ರಸಕ್ತ ಮುಂಗಡ ಪತ್ರದಲ್ಲಿ ಅನುದಾನ ಮೀಸಲಿರಿಸುವಂತೆ ಕೋರಿ ನಾಪೋಕ್ಲು ಕೊಡವ ಸಮಾಜ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿಯಾದ ಕೊಡವ ಸಮಾಜದ ಪ್ರಮುಖರು ಅಭಿವೃದ್ಧಿ ನಿಗಮ ಸ್ಥಾಪನೆ, ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಅವಕಾಶ ಮತ್ತು ಬಜೆಟ್‌ನಲ್ಲಿ ಕೊಡಗಿಗೆ ಪ್ರತ್ಯೇಕವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದರು.
ನಿಯೋಗದ ನೇತೃತ್ವ ವಹಿಸಿದ್ದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ರಾಜ್ಯ ಹಾಗೂ ರಾಷ್ಟçಕ್ಕೆ ಅಪಾರ ಕೊಡುಗೆ ನೀಡಿರುವ ಕೊಡಗಿನ ಕೊಡವ ಜನಾಂಗಕ್ಕೂ ನಿಗಮ ರೂಪಿಸಬೇಕೆಂದು ಮನವರಿಕೆ ಮಾಡಿಕೊಟ್ಟರು.
ಪ್ರತ್ಯೇಕ ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಕೊಡಗಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ ವಿಶೇಷ ಪ್ಯಾಕೇಜ್ ಅನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಹೆಗ್ಗಳಿಕೆಯನ್ನು ಹೊಂದಿರುವ ಕೊಡಗು ಜಿಲ್ಲೆಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕ್ರೀಡಾ ವಿಶ್ವ ವಿದ್ಯಾನಿಲಯವನ್ನು ನೀಡಬೇಕೆಂದು ಶಿವಕುಮಾರ್ ನಾಣಯ್ಯ ಇದೇ ಸಂದರ್ಭ ಒತ್ತಾಯಿಸಿದರು.
ಹೈಕೋರ್ಟ್ ವಕೀಲ ಮಲ್ಲಂಗಡ ಎನ್.ನೆಹರು, ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ತಿರೋಡಿರ ರಂಜನ್ ತಮ್ಮಯ್ಯ ಹಾಗೂ ಕುಲ್ಲೇಟಿರ ಮಂದಣ್ಣ ಹಾಜರಿದ್ದರು.