ಗೋಣಿಕೊಪ್ಪ ವರದಿ, ಮಾ. ೨: ದಕ್ಷಿಣ ಕೊಡಗಿಗೆ ಪ್ರತ್ಯೇಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವಿಭಾಗೀಯ ಕಚೇರಿ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸೆಸ್ಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಬೊಳಕಾರಂಡ ಕೆ. ಕುಶಾಲಪ್ಪ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಮಾತ್ರ ಸೆಸ್ಕ್ ವಿಭಾಗೀಯ ಕಚೇರಿ ಇದೆ. ಕುಟ್ಟ ಸೇರಿದಂತೆ ದೂರದಿಂದ ತೆರಳುವ ಗ್ರಾಹಕರಿಗೆ ಅನಾವಶ್ಯಕ ಹಣ, ಸಮಯ ಖರ್ಚಾಗುತ್ತಿದೆ. ಕಚೇರಿ ಆರಂಭಿಸುವುದರಿAದ ಒಬ್ಬ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೆಕ್ಕಾಧಿಕಾರಿ ಮತ್ತು ಉಗ್ರಾಣ ಕೂಡ ದೊರೆಯುತ್ತದೆ. ಚಾಮರಾಜನಗರದಲ್ಲಿ ೨, ಹಾಸನ ಜಿಲ್ಲೆಗೆ ೬, ಮಂಡ್ಯ ಜಿಲ್ಲೆಯಲ್ಲಿ ೬, ಮೈಸೂರು ಜಿಲ್ಲೆಯಲ್ಲಿ ಮತ್ತಷ್ಟು ವಿಭಾಗೀಯ ಕಚೇರಿಗಳಿದ್ದು, ಕೊಡಗು ಜಿಲ್ಲೆಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತಿಯೊಂದು ವಿಷಯಕ್ಕೂ ಮಡಿಕೇರಿಗೆ ತೆರಳುವುದು ಕಷ್ಟದ ವಿಚಾರ. ಕುಟ್ಟ ಗ್ರಾಹಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ದಕ್ಷಿಣ ಕೊಡಗಿಗೆ ಸೆಸ್ಕ್ ವಿಭಾಗೀಯ ಕಚೇರಿ ಆರಂಭಿಸಲು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಲಾಗುವುದು. ಮಂಜೂರಾತಿ ದೊರೆತರೆ ಸ್ಥಳೀಯರಿಗೂ ಹೆಚ್ಚು ಪ್ರಯೋಜನವಾಗಲಿದೆ. ಇಂಧನ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ. ಇದರಿಂದ ಕಾರ್ಯಪಾಲಕ ಅಭಿಯಂತರ ನೇಮಕವಾಗುವುದರಿಂದ ವಿದ್ಯುತ್ ಸರಬರಾಜುವಿನಲ್ಲಿ ಹೆಚ್ಚು ನಿಗಾ ವಹಿಸಲು ಅವಕಾಶ ಸಿಗುತ್ತದೆ. ವಿದ್ಯುತ್ ಸಾಮಗ್ರಿ ಕೂಡ ಜಿಲ್ಲೆಗೆ ಹೆಚ್ಚು ದೊರೆಯುತ್ತದೆ ಎಂದು ತಿಳಿಸಿದ್ದಾರೆ.