ಕೂಡಿಗೆ, ಫೆ. ೨೮ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದೊಂದಿಗೆ ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಮುಂದಾಗಬೇಕು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಮನವಿ ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಕೂಡಿಗೆ ಕ್ಲಸ್ಟರ್ ಕೇಂದ್ರದ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂಡಿಗೆ ಕ್ಲಸ್ಟರ್ ಮಟ್ಟದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಸ್.ಡಿ.ಎಂ..ಸಿ. ಅಧ್ಯಕ್ಷರು ಹಾಗೂ ಸದಸ್ಯರಿಗೆ ಏರ್ಪಡಿಸಿದ್ದ ೪ ನೇ ಹಂತದ ಸಭೆ ಹಾಗೂ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ನಮ್ಮ ಶಾಲೆ, ನನ್ನ ಕೊಡುಗೆ’ ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಶಾಲೆಯಲ್ಲಿ ಸ್ವಚ್ಛ ಪರಿಸರ ನಿರ್ಮಿಸುವ ಮೂಲಕ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶಾಲೆಗಳ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ ಕುರಿತು ಮಾಹಿತಿ ನೀಡಿದ ರಾಜ್ಯ ಎಸ್.ಡಿ.ಎಂ.ಸಿ.ಸಮನ್ವಯ ಸಮಿತಿಯ ಸದಸ್ಯ ಜಿ.ಬಿ.ಸಿದ್ದಲಿಂಗಪ್ಪ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮುದಾಯದ ಪಾತ್ರ ಕುರಿತು ವಿವರಿಸಿದರು. ತರಬೇತಿಯ ಜಿಲ್ಲಾ ನೋಡಲ್ ಅಧಿಕಾರಿ ಸಿದ್ದೇಶ್ ಕುಮಾರ್, ಎಸ್.ಡಿ.ಎಂ.ಸಿ.ಯ ಪಾತ್ರ ಹಾಗೂ ಕರ್ತವ್ಯಗಳ ಕುರಿತು ಚರ್ಚಿಸಿದರು.

ಕೂಡಿಗೆ ಡಯಟ್ ಉಪನ್ಯಾಸಕ ಯು.ಸಿ.ಸಿದ್ದೇಶಿ, ಶಾಲಾ ಶೈಕ್ಷಣಿಕ ಯೋಜನೆಗಳು ಹಾಗೂ ಹೊಸ ಶಿಕ್ಷಣ ನೀತಿ ಕುರಿತು ವಿವರಿಸಿದರು. ಸಂಪನ್ಮೂಲ ಶಿಕ್ಷಕ ಎಸ್. ಸಂತೋಷ್, ಶಾಲಾಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರ ಪಾತ್ರ ಹಾಗೂ ಶಾಲಾ ಬೆಳವಣಿಗೆ ಕುರಿತು ಮಾಹಿತಿ ನೀಡಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷೆ ಅನುಸೂಯ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸಣ್ಣಕ್ಕ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಚ್.ಎಸ್.ಉಮಾದೇವಿ, ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ದುರ್ಗೇಶ್, ಅಂಜೆಲಾ ವಿದ್ಯಾನಿಕೇತನ ಶಾಲೆಯ ಮಖ್ಯ ಶಿಕ್ಷಕಿ ಸಿಸ್ಟರ್ ವೀಣಾ ವಿಜಯ ಕ್ಯಾಸ್ಟಲಿನ್ , ಸಿ.ಆರ್.ಪಿ.ಎಸ್.ಆರ್.ಶಿವಲಿಂಗ, ಸಂಪನ್ಮೂಲ ಶಿಕ್ಷಕಿ ಮುಬೀನ ಕೌಸರ್, ಇತರರು ಇದ್ದರು. ಇದೇ ಸಂದರ್ಭದಲ್ಲಿ ಕೂಡಿಗೆ ಕ್ಲಸ್ಟರ್ ನ ಸಿ.ಆರ್.ಪಿ.ಯಾಗಿ ಉತ್ತಮ ಸೇವೆಸಲ್ಲಿಸಿದ್ದು, ಇದೀಗ ವಾಲ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮುಬೀನ ಕೌಸರ್ ಅವರನ್ನು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.