ಚೆಯ್ಯಂಡಾಣೆ, ಫೆ. ೨೭: ಕೊಡಗಿನಲ್ಲಿ ಮಳೆ ಸುರಿಯಲಾರಂಭಿಸಿದರೆ ಕೆಲವೊಮ್ಮೆ ಅರ್ಧ ವರ್ಷವೂ ವರ್ಷಧಾರೆ ಎಡೆಬಿಡದೆ ಸುರಿಯಲಾರಂಭಿಸುತ್ತದೆ. ಇದರಿಂದ ಬಹುತೇಕ ಬೆಳೆಗಾರರು ಅಡ್ಡಿಆತಂಕವನ್ನು ಎದುರಿಸುತ್ತಾರೆ. ಪ್ರಕೃತಿಯ ಎದುರು ಏನೂ ಮಾಡಲಾಗದು. ಈ ಸಂಕಷ್ಟದಿAದ ಪಾರಾಗಲು ಚೆಯ್ಯಂಡಾಣೆಯ ಕಾಫಿ ಬೆಳೆಗಾರ ಎಸ್.ಎಸ್. ಸುಮಂತ್ ಅವರು ತಮ್ಮ ೫೦೦೦ ಚದರಅಡಿ ವಿಸ್ತೀರ್ಣದಲ್ಲಿ ವಿನೂತನ ಪ್ರಯತ್ನ ನಡೆಸುವ ಮೂಲಕ ಕೊಡಗಿನ ಜನರಿಗೆ ಮಾದರಿಯಾಗಿದ್ದಾರೆ. ಕೊಡಗಿನ ಮಂಜು ಮುಸುಕಿನ ವಾತಾವರಣದಲ್ಲಿ ಹಾಗೂ ಮಳೆ ಬಂದರು ಕೂಡ ಯಾವುದೇ ಸಮಸ್ಯೆ ಇಲ್ಲದೆ ಕಾಫಿ ಒಣಗಿಸುವ ಸುಲಭ ಉಪಾಯವನ್ನು ಕಂಡುಹಿಡಿದು ಮಾದರಿಯಾಗಿದ್ದು ವಿಶೇಷ. ಇವರು ಈ ವರ್ಷ ೫೦೦೦ ಚದರಅಡಿ ವಿಸ್ತೀರ್ಣದಲ್ಲಿ ಟೆಂಟ್ ನಿರ್ಮಿಸಿ ಅದಕ್ಕೆ ಸೋಲಾರ್ ಅಳವಡಿಸಿ ವಾರಕ್ಕೆ ೬೦ ರಿಂದ ೮೦ ಚೀಲ ಕಾಫಿ ಒಣಗಿಸುತ್ತಿದ್ದಾರೆ. ಕಡಿಮೆ ತಾಪಮಾನ ಅಂದರೆ ಬೆಳಿಗ್ಗೆ ೨೫ ರಿಂದ ೩೦ ಡಿಗ್ರಿ ಮಧ್ಯಾಹ್ನದ ನಂತರ ೫೦ ರಿಂದ ೬೦ ಡಿಗ್ರಿ ತಾಪಮಾನ ಈ ನೂತನ ಆವಿಷ್ಕಾರಕ್ಕೆ ಇದ್ದು ಮಳೆ ಬಂದರೂ ಕೂಡ ಇದರಲ್ಲಿ ಒಣಗಿಸಬಹುದು ಎನ್ನುತ್ತಾರೆ ಸುಮಂತ್. ಇದರಲ್ಲಿ ಒಣಗಿಸಿದ ಕಾಫಿ ಉತ್ತಮ ಗುಣಮಟ್ಟ ಕೂಡ ಇದೆ. ಔಟರ್ನ್ ಕೂಡ ಸ್ವಲ್ಪ ಹೆಚ್ಚು ಸಿಗುತ್ತಿದೆ. ಸರಕಾರ ಬೆಳೆಗಾರರಿಗೆ ವಿಶೇಷ ಪ್ಯಾಕೆಜ್ ಮೂಲಕ ಸಬ್ಸಿಡಿ (ಸಹಾಯಧನ) ನೀಡಿ ಇದಕ್ಕೆ ಪ್ರೋತ್ಸಾಹಿಸಿದರೆ ಬೆಳಗಾರರಿಗೆ ಉತ್ತಮ ಎನ್ನುತ್ತಾರೆ ಸುಮಂತ್ ಅವರು. ಕೊಡಗಿನಲ್ಲಿ ತೆರೆಮರೆಯಲ್ಲಿ ನಿಂತು ಸಾಧನೆ ಮಾಡುವ ಅನೇಕ ಸಾಧಕರಿದ್ದಾರೆ. ಅವರನ್ನು ಉಳಿಸಿ ಬೆಳೆಸಲು ಪ್ರಜ್ಞಾವಂತ ನಾಗರಿಕರು, ಅಧಿಕಾರಿ ವರ್ಗ ಮುನ್ನೆಲೆಯಲ್ಲಿ ಕ್ರಿಯಶೀಲರಾಗಬೇಕಾಗಿದೆ. - ಅಶ್ರಫ್, ಚೆಯ್ಯಂಡಾಣೆ