ಮಡಿಕೇರಿ, ಫೆ. ೨೭: ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕರಿಮೆಣಸು, ಕೊಯ್ಲು ಆರಂಭಗೊAಡಿದೆ. ಆದರೆ, ಕೊಯ್ಲು ಮಾಡಲು ಕಾರ್ಮಿಕರು ಸಿಗದೇ ಪರದಾಡುವಂತಹ ಪರಿಸ್ಥಿತಿ ಬೆಳೆಗಾರರಿಗೆ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಬೆಲೆ ಇಲ್ಲದೆ ಕರಿಮೆಣಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇದೀಗ ಬೆಲೆ ಇದೆ, ಅಕಾಲಿಕ ಮಳೆಗೆ ತುತ್ತಾಗಿ ಕರಿಮೆಣಸು ಬಳ್ಳಿಗಳು ನಾಶಗೊಂಡು ಬೆಳೆ ಇಲ್ಲದಾಗಿದ್ದರೂ ಇರುವ ಫಸಲನ್ನು ಕುಯಿಲು ಮಾಡಲು ಸಮಸ್ಯೆ ಎದುರಾಗುತ್ತಿದೆ.

ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಲ್ಲಿ ಕರಿಮೆಣಸು ಒಂದಾಗಿದೆ. ಕಾಫಿ ಬೆಳೆಯಲ್ಲಿ ನಷ್ಟ ಹೊಂದಿದರೆ, ಕರಿಮೆಣಸಿನಲ್ಲಿ ಸರಿದೂಗಿಸಿ ಕೊಳ್ಳಬಹುದೆಂದು, ಬಹುತೇಕ ಬೆಳೆಗಾರರು ಕರಿಮೆಣಸು ಬೆಳೆಯ ಮೇಲೆ ಅವಲಂಬಿತರಾಗಿರುತ್ತಾರೆ.

ಬೆಳೆ ಇದ್ದ ಸಮಯದಲ್ಲಿ ಸೂಕ್ತ ಬೆಲೆ ಇಲ್ಲದೆ ಬೆಳೆಗಾರರು ಪರದಾಡುವಂತಹ ಪರಿಸ್ಥಿತಿ ಇತ್ತು. ಆದರೆ ಇದೀಗ ಕಳೆದ ಮೂರು ನಾಲ್ಕು ತಿಂಗಳಿನಿAದ ಕರಿಮೆಣಸು ದರ ೫೨೦ರ ಆಸುಪಾಸಿನಲ್ಲಿದೆ. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಬಾರಿ ಬೆಲೆ ಇದೆ, ಬೆಳೆ ಇಲ್ಲದಂತಾಗಿದೆ ಎಂದು ಕರಿಮೆಣಸು ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ದುಬಾರಿ ಸಂಬಳ

ಕರಿಮೆಣಸು ಕೊಯ್ಲು ಮಾಡಲು ಕಾರ್ಮಿಕರಿಗೆ ರೂ. ೭೫೦ ರಿಂದ ೮೦೦ ದಿನನಿತ್ಯ ಕೂಲಿ ಕೊಡಬೇಕಾಗಿದೆ. ಆದರೆ ಬೆಳೆ ಇಲ್ಲದೆ, ದುಬಾರಿ ಸಂಬಳ ನೀಡಿ ಕರಿಮೆಣಸು ಕೊಯ್ಲು ಮಾಡುವ ಪರಿಸ್ಥಿತಿ ಬೆಳೆಗಾರರಿಗೆ ಎದುರಾಗಿದೆ.

ಸ್ಥಳೀಯ ಕಾರ್ಮಿಕರಿಗೆ ರೂ. ೭೫೦ ರಿಂದ ೮೦೦ ದಿನಕೂಲಿ ನೀಡಬೇಕು. ಕಳೆದ ಎರಡು ವರ್ಷಗಳ ಹಿಂದೆ ಬಹುತೇಕ ಕರಿಮೆಣಸು ಬೆಳೆಗಾರರು ಹೊರ ರಾಜ್ಯದ ಕಾರ್ಮಿಕರನ್ನು ಕರಿಮೆಣಸು ಕೊಯ್ಲಿಗೆ ಕರೆಸಿಕೊಳ್ಳುತ್ತಿದ್ದರು. ಹೊರ ರಾಜ್ಯದ ಕಾರ್ಮಿಕರು ೪೫೦ ರಿಂದ ೫೦೦ ರೂ ದಿನ ಕೂಲಿಗೆ ಕರಿಮೆಣಸು ಕೊಯ್ಲು ಮಾಡುತ್ತಿದ್ದರು. ಹೊರ ರಾಜ್ಯದ ಕಾರ್ಮಿಕರು ಜಿಲ್ಲೆಗೆ ಕರಿಮೆಣಸು ಕೊಯ್ಲಿನ ಸಮಯದಲ್ಲಿ ಆಗಮಿಸುತ್ತಿರುವುದರಿಂದ ಜಿಲ್ಲೆಯ ಸ್ಥಳೀಯ ಕಾರ್ಮಿಕರಿಗೆ ಕೆಲಸ ಇಲ್ಲದಾಗುತ್ತಿತ್ತು.

ಆದರೆ ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಹೊರ ರಾಜ್ಯದ ಕಾರ್ಮಿಕರು ಜಿಲ್ಲೆಗೆ ಕರಿಮೆಣಸು ಕೊಯ್ಲಿಗೆ ಬರುತ್ತಿರಲಿಲ್ಲ. ಬಹುತೇಕ ಎಲ್ಲಾ ತೋಟಗಳಲ್ಲಿ ಸ್ಥಳೀಯ ಕಾರ್ಮಿಕರೇ ಕರಿಮೆಣಸು ಕೊಯ್ಲು ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ ಕರಿಮೆಣಸು ಬೆಳೆಗಾರರು ಹೊರರಾಜ್ಯದ ಕಾರ್ಮಿಕರು ಸಿಗದೆ ಇರುವ ಕಾರಣದಿಂದ ಸ್ಥಳೀಯ ಕಾರ್ಮಿಕರಿಗೆ ಹೆಚ್ಚು ಬೇಡಿಕೆ ಇದ್ದ ಕಾರಣದಿಂದ ದುಬಾರಿ ಕೂಲಿ ನೀಡಿ ಕರಿಮೆಣಸು ಕೊಯ್ಲು ಮಾಡಿದ್ದರು.

ಅಲ್ಯೂಮಿನಿಯಂ ಏಣಿ ಆತಂಕ

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರಿಮೆಣಸು ಕೊಯ್ಲು ಮಾಡುವ ವೇಳೆಯಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿ ಸಾವು-ನೋವುಗಳು ಸಂಭವಿಸಿದೆ. ಜಿಲ್ಲೆಯ ಬಹುತೇಕ ತೋಟಗಳ ಮಧ್ಯದಲ್ಲೆ ವಿದ್ಯುತ್ ತಂತಿಗಳು ಹಾದುಹೋಗಿದೆ. ಕರಿಮೆಣಸು ಕೊಯ್ಲು ಮಾಡಲು ಇತ್ತೀಚಿನ ದಿನಗಳಲ್ಲಿ ಬಿದಿರು ಏಣಿಗಳಿಗಿಂತ, ಅಲ್ಯೂಮಿನಿಯಂ ಏಣಿಯ ಮೊರೆ ಹೋಗಿದ್ದಾರೆ ಬೆಳೆಗಾರರು. ಅಲ್ಯೂಮಿನಿಯಂ ಏಣಿ ಬಳಸಿ ಕರಿಮೆಣಸು ಕೊಯ್ಲು ಮಾಡುವಾಗ ತೋಟಗಳಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದೆಯಾ ಎಂದು ಕಾರ್ಮಿಕರು ಎಚ್ಚರ ವಹಿಸಬೇಕಾಗಿದೆ.

ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಕರಿಮೆಣಸು ಕೊಯ್ಲು ಆರಂಭಗೊAಡಿದ್ದು, ಮಾರ್ಚ್ ಮೊದಲ ವಾರದಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೊಯ್ಲು ಆರಂಭಗೊಳ್ಳಲಿದೆ. ಫೆಬ್ರವರಿ ತಿಂಗಳಿನಿAದ ಮೇ ತಿಂಗಳವರೆಗೆ ಕರಿಮೆಣಸು ಕೊಯ್ಲು ಕೆಲಸ ಇರಲಿದೆ.

ಇದೀಗ ಕರಿಮೆಣಸು ಬೆಳೆಗಾರರು ಕಡಿಮೆ ಸಂಬಳಕ್ಕೆ ಹೊರ ರಾಜ್ಯದ ಕಾರ್ಮಿಕರನ್ನು ಕರಿಮೆಣಸು ಕೊಯ್ಲಿಗೆ ಕರೆಸಿಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಜಿಲ್ಲೆಯ ಬಹುತೇಕ ತೋಟಗಳಲ್ಲಿ ತಮಿಳುನಾಡು ಮೂಲದ ಕಾರ್ಮಿಕರು ಕರಿಮೆಣಸು ಕೊಯ್ಲು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸ್ಥಳೀಯ ಕಾರ್ಮಿಕರಿಗೆ ದುಬಾರಿ ಸಂಬಳ ನೀಡಬೇಕೆಂಬ ಕಾರಣದಿಂದ ಕರಿಮೆಣಸು ಬೆಳೆಗಾರರು ಹೊರ ರಾಜ್ಯದ ಕಾರ್ಮಿಕರ ಮೇಲೆ ಅವಲಂಬಿತ ರಾಗಿದ್ದಾರೆ ಎನ್ನಲಾಗುತ್ತಿದೆ.

-ಕೆ.ಎಂ. ಇಸ್ಮಾಯಿಲ್, ಕಂಡಕರೆ