ಶನಿವಾರಸಂತೆ, ಫೆ. ೨೭: ಸಮೀಪದ ಕೊಡ್ಲಿಪೇಟೆಯಿಂದ ತಾಲೂಕಿನ ಹಾಲೇರಿವರೆಗಿನ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ಹಾಳಾಗಿದ್ದು, ಸಂಚಾರ ತ್ರಾಸದಾಯಕವಾಗಿರುವ ಕಾರಣ ಗುಂಡಿ ಮುಚ್ಚುವ ದುರಸ್ತಿ ಕೆಲಸಕ್ಕೆ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಮಂಜೂರಾಗಿದ್ದರೂ ಕೆಲಸವೇ ನಡೆಯುತ್ತಿಲ್ಲ. ಕೆಲವೆಡೆ ನಡೆದರೂ ಕಳಪೆ ಕೆಲಸ ಎಂದು ಕರವೇ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಗಳ ದುರಸ್ತಿ ಕೆಲಸ ನೋಡಿಕೊಳ್ಳಲು ನೇಮಿಸಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಇತ್ತ ಗಮನ ಹರಿಸುತ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾಡಿಸದಿದ್ದರೂ ಬಿಲ್ ಮಾಡುವ ಕೆಲಸ ಮಾತ್ರ ತಪ್ಪದೆ ನಡೆದಿದೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಹಾಗೂ ಕಾರ್ಯಕರ್ತರು ಆರೋಪಿಸಿದ್ದಾರೆ.

ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಶೀಘ್ರ ನಡೆಯಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ಲೋಕಾಯುಕ್ತಕ್ಕೆ, ಸರಕಾರಕ್ಕೆ ದೂರು ಸಲ್ಲಿಸಬೇಕಾಗುವುದು ಎಂದು ಅವರು ಹೇಳಿದ್ದಾರೆ.