.jpg)
ಮಡಿಕೇರಿ,ಫೆ.೨೬: ಜಿಲ್ಲೆಯ ಪವಿತ್ರ ಕ್ಷೇತ್ರವಾಗಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಕೊಡವ ಜನಾಂಗದವರಿಗೆ ಹೆಚ್ಚಿನ ಸ್ಥಾನ ನೀಡುವದರೊಂದಿಗೆ ಆದ್ಯತೆ ನೀಡಬೇಕೆಂದು ದೇವಾಲಯ ಸಮಿತಿ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿ ಆಕಾಂಕ್ಷಿ ಗಳಾಗಿರುವವರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರ್ಜಿದಾರರ ಲ್ಲೊಬ್ಬರಾದ ಕೊಕ್ಕಲೆರ ತಿಮ್ಮಯ್ಯ, ಧಾರ್ಮಿಕ ದತ್ತಿ ಇಲಾಖೆ ಕಳೆದ ೨೦೨೧ರ ಫೆಬ್ರವರಿಯಲ್ಲಿ ಹೊರಡಿಸಿದ ಅಧಿಸೂಚನೆಯಂತೆ ನಾವುಗಳು ಅರ್ಜಿ ಸಲ್ಲಿಸಿದ್ದೆವು. ಒಟ್ಟು ೬೩ ಮಂದಿ ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖಾ ವತಿಯಿಂದ ನಮಗಳ ಬಗ್ಗೆ ಪರಿಶೀಲನೆ ಕೂಡ ಮಾಡಲಾಗಿದೆ. ಆದರೆ, ಜುಲೈ ತಿಂಗಳಲ್ಲಿ ಪರಿಶೀಲನೆ ಮಾಡಿದ್ದು, ಅದಕ್ಕೂ ಮುನ್ನವೇ, ಅಂದರೆ ಜೂನ್ ತಿಂಗಳಲ್ಲೇ ಕ್ಷೇತ್ರದ ಶಾಸಕರಾದ ಕೆ. ಜಿ. ಬೋಪಯ್ಯ ಅವರು ತಮಗೆ ಬೇಕಾದವರ ಒಂಬತ್ತು ಮಂದಿಯ ಹೆಸರುಗಳನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಮಾಡಿ ಕಳುಹಿಸಿ ಕೊಟ್ಟಿದ್ದಾರೆ. ನಂತರದಲ್ಲಿ ಕಳೆದ ಫೆಬ್ರವರಿಯಲ್ಲಿ ಅದೇ ಒಂಬತ್ತು ಮಂದಿಯನ್ನು ನೇಮಕಾತಿ ಮಾಡಿ ಸರಕಾರ ಆದೇಶ ಮಾಡಿದೆ. ದೇವಾಲಯದ ವಿಚಾರದಲ್ಲಿ ಶಾಸಕರು ಮಧ್ಯ ಪ್ರವೇಶ ಮಾಡಲು ಕಾರಣವೇನೆಂದು ಪ್ರಶ್ನಿಸಿದರು.
ಸಮಿತಿಯಲ್ಲಿ ಗರಿಷ್ಠ ಸಂಖ್ಯೆಯ ಸದಸ್ಯರುಗಳು ಅರೆಭಾಷೆ ಸಮುದಾಯಕ್ಕೆ ಒಳಪಟ್ಟವರಾಗಿದ್ದಾರೆ. ಕೇವಲ ಈರ್ವರು ಕೊಡವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರ್ಚಕರ ಕೋಟಾ
(ಮೊದಲ ಪುಟದಿಂದ) ಪ್ರಕಾರ ಪೌರೋಹಿತ್ಯ ಮಾಡುತ್ತಿರುವವರಿಗೆ ಅವಕಾಶ ನೀಡಬೇಕಿದೆ. ಆದರೆ, ಆಟೋ ಚಾಲಕರನ್ನು ನೇಮಕ ಮಾಡಲಾಗಿದೆ. ಈರ್ವರು ಮಹಿಳೆಯರಿಗೆ ಅವಕಾಶ ನೀಡಬೇಕಿದ್ದರೂ ಓರ್ವರಿಗೆ ಮಾತ್ರ ನೀಡಲಾಗಿದೆ. ಅಲ್ಲದೆ, ದೇವಾಲಯಕ್ಕೆ ಸೇರಿದ ಭೂಮಿ ಕಬಳಿಕೆ ಮಾಡಿದವರಿಗೂ ಅವಕಾಶ ನೀಡಲಾಗಿದೆ. ಇದು ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜಕೀಯ ಪ್ರೇರಿತವಾಗಿ ರಚಿಸಲಾಗಿರುವ ಸಮಿತಿಯಾಗಿದೆ ಎಂದು ಆರೋಪಿಸಿದರು. ಈ ಸಂಬAಧ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ನೆ ನೀಡಿದೆ. ಸಮಿತಿಯಲ್ಲಿ ಬದಲಾವಣೆ ಮಾಡಿ ಕೊಡವರಿಗೆ ನಾಲ್ಕು ಸ್ಥಾನ ನೀಡಲೇಬೇಕು ಇಲ್ಲವಾದಲ್ಲಿ ಎಲ್ಲರನ್ನು ಸಂಘಟಿಸಿ ಹೋರಾಟ ಮಾಡಲಾಗುವದೆಂದು ಎಚ್ಚರಿಸಿದರು.
ಮತ್ತೋರ್ವ ಅರ್ಜಿದಾರ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ಮಾತನಾಡಿ; ನಮಗೆ ಪರಿಶೀಲನೆಗಾಗಿ ಜುಲೈನಲ್ಲಿ ಕರೆ ಬಂದಿದೆ. ಆದರೆ, ಶಾಸಕರು ಜೂನ್ ತಿಂಗಳಲ್ಲಿಯೇ ಶಿಫಾರಸು ಪತ್ರ ಕಳುಹಿಸಿದ್ದರು. ಪರಿಶೀಲನೆಯ ನೆಪದಲ್ಲಿ ನಮ್ಮನ್ನು ಅಲೆದಾಡಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ಪೊಲೀಸ್ ಇಲಾಖೆಯಿಂದ ಪರಿಶೀಲನೆ ಮಾಡುವದು ಸಹಜ, ಆದರೆ, ಕಂದಾಯ ಇಲಾಖೆಯಿಂದ ಪರಿಶೀಲನೆ ಮಾಡುವ ಅವಶ್ಯಕತೆ ಇಲ್ಲವೆಂದು ಹೇಳಿದರು.
ಮತ್ತೋರ್ವ ಆಕಾಂಕ್ಷಿ ಅಪ್ಪಚ್ಚಿರ ನೀಲಮ್ಮ ಮಾತನಾಡಿ; ಕೊಡವರ ಕುಲದೇವಿ ಕಾವೇರಿ ಮಾತೆಯನ್ನು ಆರಾಧಿಸುವವರಿಗೆ ಸಮಿತಿಯಲ್ಲಿ ಅವಕಾಶ ನೀಡಬೇಕು. ಅಪ್ಪಚ್ಚಿರ ಕುಟುಂಬಸ್ಥರು ಈ ಹಿಂದೆಯೇ ದೇವಾಲಯಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಹಿಂದೆ ಅದೇ ಭೂಮಿಯಲ್ಲಿ ಬೆಳೆದ ಅಕ್ಕಿಯನ್ನು ಪತ್ತಾಯಕ್ಕೆ ಹಾಕುತ್ತಿದ್ದರು. ದೇವಾಲಯದಲ್ಲಿ ದಾನಿಗಳ ಪಟ್ಟಿಯಲ್ಲಿ ಅಪ್ಪಚ್ಚಿರ ಕುಟುಂಬದ ಹೆಸರಿತ್ತು. ಅಲ್ಲದೆ, ಒಂದು ಕೋಣೆ ಕೂಡ ಮೀಸಲಿಡಲಾಗಿತ್ತು. ಇದೀಗ ಯಾವದೂ ಇಲ್ಲ ಎಂದು ಹೇಳಿದರು. ತೀರ್ಥ ಕುಂಡಿಕೆ ಬಳಿ ಕೂಡ ತೊಂದರೆ ಮಾಡಲಾಗುತ್ತಿದೆ. ಇದು ಕೊಡವರನ್ನು ದೂರ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಹಾಜರಿದ್ದ ಶಾಂತೆಯAಡ ನಿರನ್ ಮಾತನಾಡಿ, ಶಾಸಕರು ಇಂತಹ ವಿಷಯಗಳನ್ನು ಕೈಬಿಟ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಲಿ ಎಂದರು.