
ಮಡಿಕೇರಿ, ಫೆ. ೨೬: ಗಂಡಾAತರ ಇದ್ದರೆ ಯಾವ ರೂಪದಲ್ಲಾದರೂ ಹೇಗೆ ಬೇಕಾದರೂ ಎದುರಾಗಬಹುದು ಎಂಬುದಕ್ಕೆ ಇಲ್ಲೊಂದು ಘಟನೆ ಉದಾಹರಣೆಯಾಗಿದೆ.
ಶಾಂತಕುಮಾರಿ ಮಡಿಕೇರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್. ದಿನನಿತ್ಯ ಕುಶಾಲನಗರದಿಂದ ಮಡಿಕೇರಿಗೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಾ ಬಂದು ಕರ್ತವ್ಯಕ್ಕೆ ನಿಯೋಜಿತರಾಗುತ್ತಿದ್ದರು.
ಶುಕ್ರವಾರ ಕೂಡ ಎಂದಿನAತೆ ಬೆಳಿಗ್ಗೆ ೭ ಗಂಟೆಗೆ ಕುಶಾಲನಗರದಿಂದ ಸರ್ಕಾರಿ ಬಸ್‌ನಲ್ಲಿ ಮಡಿಕೇರಿಯತ್ತ ಪ್ರಯಾಣ ಪ್ರಾರಂಭಿಸಿದ್ದರು. ಮಡಿಕೇರಿ ಹೊರವಲಯದಲ್ಲಿನ ಅರಣ್ಯ ಭವನ ಬಳಿ ಬರುತ್ತಿದ್ದಂತೆಯೇ ಬಸ್ ಟೈರ್ ಸ್ಫೋಟದ ಸದ್ದಿನೊಂದಿಗೆ ಒಡೆದುಹೋಯಿತು. ಈ ರೀತಿ ಚಕ್ರ ಒಡೆಯುವ ಸಂದರ್ಭ ಬಸ್ ಒಳಗೆ ಕಂಡಕ್ಟರ್ ಆಸನದ ಬಳಿಯಲ್ಲಿರುವ ಚಕ್ರದ ಒಳ ಆವರಣದ ಡೂಮ್ ಕೂಡ ಒಡೆದು ಛಿದ್ರವಾಯಿತು.
ಗ್ರಹಚಾರಕ್ಕೆ ಈ ಶಾಂತಕುಮಾರಿ ಬಸ್ ಒಳಗೆ ಡೂಮ್ ಮೇಲಿನ ಸೀಟ್‌ನಲ್ಲಿಯೇ ಕುಳಿತಿದ್ದರು. ಡೂಮ್ ಒಡೆಯುತ್ತಿದ್ದಂತೆಯೇ ಶಾಂತಕುಮಾರಿಯ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾದವು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪ್ರಾರಂಭಿಸಲಾಯಿತು. ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಆನಂದ್, ಡಾ. ಮಂಜುನಾಥ್, ಡಾ. ಸಂತೋಷ್ ಈಕೆಯ ಎರಡೂ ಕಾಲಿಗೂ ೫.೩೦ ಗಂಟೆಗಳ ಸುದೀರ್ಘ ಅವಧಿಗೆ ಶಸ್ತçಚಿಕಿತ್ಸೆ ಕೈಗೊಂಡರು.
ಇನ್ನು ೬ ತಿಂಗಳು ಶಾಂತಕುಮಾರಿ ನಡೆದಾಡುವಂತಿಲ್ಲ. ವಿಶ್ರಾಂತಿಯಲ್ಲಿಯೇ ಇರಬೇಕೆಂದು ವೈದ್ಯರ ಕಟ್ಟಾಜ್ಞೆ. ಸದ್ಯಕ್ಕೆ ಶಾಂತಕುಮಾರಿ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಆರೋಗ್ಯವಾಗಿದ್ದಾರೆ.
ಬಸ್‌ನ ಹೊರಗಿನ ಟೈರ್ ಒಡೆದು ಅದು ಒಳಗಿನ ಡೂಮ್ ಛಿದ್ರಗೊಳ್ಳುವಷ್ಟು ಪರಿಣಾಮ ಬೀರಿ ಪ್ರಯಾಣಿಕರ ಕಾಲೂ ಛಿದ್ರವಾದೀತು ಎಂದು ಯಾರು ತಾನೇ ಯೋಚಿಸಲು ಸಾಧ್ಯ? ಹೀಗೂ ಸಂಭವಿಸುತ್ತದೆ ಎನ್ನಲು ಇದೊಂದು ಉದಾಹರಣೆ.
- ಅನಿಲ್ ಎಚ್.ಟಿ.