ಕುಶಾಲನಗರ, ಫೆ. ೨೬: ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕುಶಾಲನಗರ ಐತಿಹಾಸಿಕ ತಾವರೆಕೆರೆಯ ಬಫರ್ ಜೋನ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಎರಡು ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ನಡೆಯಿತು.

ಸುಮಾರು ೩.೮೪ ಎಕರೆ ವ್ಯಾಪ್ತಿಯ ಕೆರೆಯ ಸುತ್ತ ೩೦ ಮೀಟರ್ ಅಂತರದಲ್ಲಿ ಕಳೆದ ಕೆಲವರ್ಷಗಳಿಂದ ಅಕ್ರಮವಾಗಿ ಕಟ್ಟಡಗಳು ನಿರ್ಮಾಣಗೊಂಡಿರುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೈಕೋರ್ಟ್ ಹಿರಿಯ ವಕೀಲ ಅಮೃತೇಶ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರದ ವರದಿಯನ್ನು ಕೇಳಿದ್ದು, ಇದೀಗ ನ್ಯಾಯಾಲಯದ ಆದೇಶದಂತೆ ಎರಡು ಕಟ್ಟಡಗಳನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಪುರುಷೋತ್ತಮ್ ಮತ್ತು ಲೋಹಿತ್ ಇವರುಗಳು ನಡೆಸುತ್ತಿದ್ದ ಮರದ ಮಿಲ್ ಹಾಗೂ ಸಂತೋಷ್ ಎಂಬವರು ನಡೆಸುತ್ತಿದ್ದ ಅಂಗಡಿಗಳು ತೆರವುಗೊಂಡವು.

ಆದೇಶದ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಮೂಲಕ ಕಟ್ಟಡದ ಮಾಲೀಕರಿಗೆ ಏಳು ದಿನಗಳ ನೋಟೀಸ್ ನೀಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದಲ್ಲಿ ಸಿಬ್ಬಂದಿಗಳು ಪೊಲೀಸರ ಸಹಕಾರದೊಂದಿಗೆ ತೆರಳಿದ ಸಂದರ್ಭ ಕಟ್ಟಡವನ್ನು ಕಟ್ಟಿದವರು ತಾವೇ ತೆರವುಗೊಳಿಸುತ್ತಿದ್ದ ದೃಶ್ಯ ಕಂಡುಬAತು.

ಕೆರೆ-ಕಟ್ಟೆ ಮೊದಲಾದ ಜಲಮೂಲಗಳು ಹಾಗೂ ನಿರ್ಬಂದಿತ ಪ್ರದೇಶದಲ್ಲಿನ ಅಕ್ರಮ ಕಟ್ಟಡ ಅಥವಾ ರಚನೆಗಳನ್ನು ತೆರವುಗೊಳಿಸುವ ಕುರಿತು ಸರ್ಕಾರ ಕೂಡ ಸಂಬAಧಿಸಿದ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.