ಮಡಿಕೇರಿ, ಫೆ. ೨೬: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಹಾಗೂ ಸಹಕಾರ ಇಲಾಖೆ, ಕೊಡಗು ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್, ಪಿಕಾರ್ಡ್ ಬ್ಯಾಂಕ್, ಪ್ಯಾಕ್ಸ್, ಎ.ಪಿ.ಸಿ.ಎಂ.ಎಸ್., ಪತ್ತಿನ ಸಹಕಾರ ಸಂಘ ಹಾಗೂ ಮಾರಾಟ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ, ಆದಾಯ ತೆರಿಗೆ ಹಾಗೂ ಕೃಷಿ ಮೂಲಭೂತ ಸೌಕರ್ಯ ನಿಧಿಯಡಿ ಹಣಕಾಸು ಸೌಲಭ್ಯಗಳು ವಿಷಯಗಳ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹಿರಿಯರ ದೂರದೃಷ್ಟಿಯಿಂದ ಸ್ಥಾಪಿಸಲ್ಪಟ್ಟ ಸಹಕಾರ ಸಂಘಗಳು ಇಂದು ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿರುವುದಲ್ಲದೆ ಅದರಲ್ಲಿ ಸಿಬ್ಬಂದಿಗಳ ಪಾತ್ರ ಅಪಾರ. ಕಾಯ್ದೆ, ಕಾನೂನಿನ ಅಂತೆಯೇ ಸಂಘದ ದೈನಂದಿನ ವ್ಯವಹಾರಗಳ ಕುರಿತು ಮಾಹಿತಿಗಳನ್ನು ಇಂತಹ ತರಬೇತಿ ಕಾರ್ಯಕ್ರಮಗಳಿಂದ ಪಡೆದು ಆಡಳಿತ ಮಂಡಳಿ ಹಾಗೂ ಇಲಾಖೆಯ ನಡುವಿನ ಕೊಂಡಿಯಾಗಿ ಸಂಘದಲ್ಲಿ ಅನುಷ್ಠಾನಗೊಳಿಸುವುದು ಸಿಬ್ಬಂದಿಗಳ ಕರ್ತವ್ಯವಾಗಿದೆ. ಒಂದು ಹಂತದಲ್ಲಿ ಸಂಘದ ಅಭಿವೃದ್ಧಿಗಾಗಿ ಸಿಬ್ಬಂದಿಗಳೇ ಆಧಾರಸ್ತಂಭ ಎಂದರೆ ತಪ್ಪಾಗಲಾರದು. ಸಿಬ್ಬಂದಿಗಳು ಕಾಲಕಾಲಕ್ಕೆ ಬದಲಾಗುವಂತಹ ಕಾಯ್ದೆಗಳ ಕುರಿತು ಅರಿತು ಬದ್ಧತೆಯಿಂದ ಕೆಲಸ ನಿರ್ವಹಿಸಿದಲ್ಲಿ ಸಂಘದಲ್ಲಿ ನಡೆಯುವ ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು ಕೊಡಗು ಜಿಲ್ಲೆ ಸಹಕಾರ ಚಳುವಳಿಯಲ್ಲಿ ಭವ್ಯ ಇತಿಹಾಸ ಹೊಂದಿದೆ. ಸರ್ಕಾರದ ವ್ಯವಸ್ಥೆಗಳು ಜನಸಾಮಾನ್ಯರಿಗೆ ತಲುಪಲೆಂದು ಸಹಕಾರ ಸಚಿವಾಲಯ ಸ್ಥಾಪನೆಯಾಗಿದೆ. ಈ ಬಾರಿಯ ಕೇಂದ್ರ ಬಜೆಟ್ ಅನ್ವಯ ಕೃಷಿ ಪತ್ತಿನ ಸಹಕಾರ ಸಂಘಗಳ ಡಿಜಿಟಲೀಕರಣಕ್ಕೆ ೩೫೦ ಕೋಟಿ ರೂ., ಸಹಕಾರದಿಂದ ಸಮೃದ್ಧಿ ಯೋಜನೆಗೆ ೨೭೪ ಕೋಟಿ ರೂ. ಸೇರಿದಂತೆ ಸಹಕಾರ ಕ್ಷೇತ್ರಕ್ಕೆ ೧೫೨೪ ಕೋಟಿ ರೂ. ಅನುದಾನ ಒದಗಿಸಿದಂತಾಗಿದೆ. ಪ್ರಸ್ತುತ ಇರುವ ೬೦,೦೦೦ ಸಹಕಾರ ಸಂಘಗಳ ಸಂಖ್ಯೆಯನ್ನು ೩ ಲಕ್ಷಕ್ಕೆ ಏರಿಸಬೇಕು. ಏಕೆಂದರೆ ಸರ್ವರಿಗೂ ಅದರ ಸೌಲಭ್ಯಗಳು ಸಿಗುವಂತಾಗಬೇಕು. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಎಂಬ ಅದ್ಭುತ ಪರಿಕಲ್ಪನೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಎಲ್ಲಾ ಯೋಜನೆಗಳನ್ನು ಕಾನೂನು ಕಾಯ್ದೆಗಳನ್ನು ಮನವರಿಕೆ ಮಾಡಿಕೊಂಡು ಆಡಳಿತ ಮಂಡಳಿ ಸದಸ್ಯರ ಗಮನಕ್ಕೆ ತರುವುದಲ್ಲದೆ ಅನುಷ್ಠಾನಕ್ಕೆ ಇಳಿಸುವುದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಅವರು ಇತ್ತೀಚಿನ ಕಾಯ್ದೆ ತಿದ್ದುಪಡಿ ಕುರಿತು, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನ ಎಂ. ಶೇಖ್ರವರು ಒಂದು ಜಿಲ್ಲೆ ಒಂದು ಉತ್ಪಾದನೆ ಹಾಗೂ ಕೃಷಿಗೆ ಸಂಬAಧಿಸಿದ ಯೋಜನೆಗಳ ಕುರಿತು, ಕೃಷಿ ಮೂಲಭೂತ ಸೌಕರ್ಯನಿಧಿಯಡಿ ಹಣಕಾಸು ಸೌಲಭ್ಯಗಳು ವಿಷಯದ ಬಗ್ಗೆ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಬಿ.ವಿ. ರಮೇಶ್ ಮತ್ತು ಆದಾಯ ತೆರಿಗೆ ಹಾಗೂ ಕೇಂದ್ರ ಬಜೆಟ್ ಅನ್ವಯ ಸಹಕಾರ ಸಂಘಗಳ ತೆರಿಗೆ, ಜಿ.ಎಸ್.ಟಿ. ವಿಷಯದ ಬಗ್ಗೆ ಸನ್ನದು ಲೆಕ್ಕಪರಿಶೋಧಕ ಯತೀಶ್ ವಿ.ಎ.ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಉಮೇಶ್ ಉತ್ತಪ್ಪ ಉಪಸ್ಥಿತರಿದ್ದರು.
ಯೂನಿಯನ್ ನಿರ್ದೇಶಕ ಕೊಡಪಾಲು ಗಣಪತಿಯವರು ಸರ್ವರನ್ನು ಸ್ವಾಗತಿಸಿ, ಮತ್ತೋರ್ವ ಯೂನಿಯನ್ ನಿರ್ದೇಶಕ ಕನ್ನಂಡ ಸಂಪತ್ ವಂದಿಸಿದರು. ಯೂನಿಯನ್ನ ವ್ಯವಸ್ಥಾಪಕಿ ಶ್ರೀಮತಿ ಆರ್. ಮಂಜುಳ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವನ್ನು ಸಿಬ್ಬಂದಿಗಳಾದ ಬಿ.ಸಿ. ಅರುಣ್ ಕುಮಾರ್, ಸುರೇಶ್ ಅವರು ನಿರ್ವಹಿಸಿದರು.