ಮಡಿಕೇರಿ, ಫೆ. ೨೬: ೨೦೨೧ರಲ್ಲಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಕೃಷಿ, ಕಾಫಿ ಹಾಗೂ ಸಂಬಾರ ಬೆಳೆಗಳು ನಾಶಗೊಂಡಿದ್ದು, ಇದಕ್ಕೆ ಪರಿಹಾರವಾಗಿ ಎನ್.ಡಿ.ಆರ್.ಎಫ್ ನಿಧಿಯಡಿ ಒಟ್ಟು ೧೬ ಹಂತಗಳಲ್ಲಿ ರೂ.೧೦೫ ಕೋಟಿ ೬೭ ಲಕ್ಷ ೫ ಸಾವಿರದ ೨೫೨ ಹಣ ಬೆಳೆ ಹಾನಿ ಪರಿಹಾರದ ಮೂಲಕ ಬಿಡುಗಡೆಯಾಗಿದ್ದು, ೫೧,೨೯೬ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮೊದಲನೆ ಹಂತದಲ್ಲಿ ೧೧೬ ಫಲಾನುಭವಿಗಳನ್ನು ಗುರುತಿಸಿ ನವೆಂಬರ್ ೨೦೨೧ ರಂದು ರೂ. ೨೫ ಲಕ್ಷ ೮೩ ಸಾವಿರದ ೩೨೨ ಬಿಡುಗಡೆ ಮಾಡಲಾಗಿತ್ತು. ನಂತರದಲ್ಲಿ ಹಂತ ಹಂತವಾಗಿ ಪರಿಹಾರ ನೀಡುವ ಕಾರ್ಯ ಚುರುಕುಗೊಂಡಿದ್ದು, ಇದೀಗ ೧೬ನೇ ಹಂತದಲ್ಲಿ ತಾ.೨೫ ರಂದು ೭೬೪ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. ೯೨ ಲಕ್ಷ ೭ ಸಾವಿರದ ೨೬೬ ಹಣ ವರ್ಗಾವಣೆಗೊಂಡಿದೆ.