ಮಡಿಕೇರಿ, ಫೆ. ೨೬: ಕಾಲ್ಸ್ ಶಾಲೆಯಲ್ಲಿ ತಾ. ೧೨ ರಂದು ೧೪ನೇ ವರ್ಷದ ಪದವಿ ಸಮಾರಂಭವನ್ನು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ೧೦ನೇ ತರಗತಿಯ ೭೫ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಎ.ಎಸ್. ಪೊನ್ನಣ್ಣ ಅವರು ಆಗಮಿಸಿದ್ದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬದುಕಿನಲ್ಲಿ ಪ್ರತಿಯೊಂದು ಕೆಲಸಕ್ಕೂ ಪೂರ್ವ ಸಿದ್ಧತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವುದರೊಂದಿಗೆ ವೃತ್ತಿ ದೊಡ್ಡದಿರಲಿ-ಸಣ್ಣದಿರಲಿ, ಪ್ರಾಮಾಣಿಕತೆ, ಶಿಸ್ತು, ಶ್ರಮ, ಸಹನೆ ಹಾಗೂ ಸಮಯ ಪ್ರಜ್ಞೆಯಲ್ಲಿ ಕೊರತೆ ಇರಬಾರದು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕ ದತ್ತಾ ಕರುಂಬಯ್ಯ, ಅಶ್ವಿನಿ ನಾಚಪ್ಪ, ಶಾಲಾ ಪ್ರಾಂಶುಪಾಲೆ ಗೌರಮ್ಮ ನಂಜಪ್ಪ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು. ಸಮಾರಂಭದ ವೀಕ್ಷಣೆಯನ್ನು ಪೋಷಕರು ಯೂಟ್ಯೂಬ್ ಮೂಲಕ ನೇರವಾಗಿ ವೀಕ್ಷಿಸಿದರು.