ನೂತನ ಪದಾಧಿಕಾರಿಗಳ ಆಯ್ಕೆ

ಸಿದ್ದಾಪುರ, ಫೆ. ೨೫: ೧೯೭೫ರಲ್ಲಿ ಪ್ರಾರಂಭವಾದ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧೀನದಲ್ಲಿರುವ ಎಸ್‌ಎಂಓ ಅನಾಥಾಶ್ರಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು.ಎಂ. ಮುಸ್ತಫಾ ಹಾಜಿ ತಿಳಿಸಿದ್ದಾರೆ.

ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಎಸ್‌ಎಂಓ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದೆಷ್ಟೋ ಬಡ ನಿರ್ಗತಿಕ ವಿದ್ಯಾರ್ಥಿಗಳು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿಂದೆ ಕಲಿತ ವಿದ್ಯಾರ್ಥಿಗಳು ನಿರ್ಗತಿಕ ಮಕ್ಕಳಿಗೆ ಪ್ರೋತ್ಸಾಹ ನೀಡಿದಲ್ಲಿ ಶಿಕ್ಷಣದೊಂದಿಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. ಎಸ್‌ಎಂಓ ಅನಾಥಾಲಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು.

ಎಸ್‌ಎAಓ ನೂತನ ಸಮಿತಿಗೆ ಆಯ್ಕೆ

ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಲ್ಮಾನ್ ಕೂಡಿಗೆ, ಉಪಾಧ್ಯಕ್ಷರಾಗಿ ಮಹಮ್ಮೂದ್ ಮಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಹೆಚ್. ಇಬ್ರಾಹಿಂ ಗೋಣಿಕೊಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಹನೀಫ್ ಗುಹ್ಯ, ಸಮೀರ್ ಖಜಾಂಚಿಯಾಗಿ ನಾಸಿರ್ ಸಿದ್ದಾಪುರ ಸೇರಿದಂತೆ ಆಡಳಿತ ಮಂಡಳಿಯ ಹನ್ನೆರಡು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಎಸ್‌ಎಂಓ ಅನಾಥಾಶ್ರಮದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಉಬೈದುಲ್ಲಾ ಉಸ್ತಾದ್, ಅಲಿವಿ ಉಸ್ತಾದ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು

ಈ ಸಂದರ್ಭ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ರವೂಫ್ ಹಾಜಿ, ಪ್ರಮುಖರಾದ ಕೆ.ಯು. ಮಜೀದ್, ಉಮ್ಮರ್, ಅಶ್ರಫ್, ಕರೀಂ, ಮೊಯಿದ್ದೀನ್, ಬಸೀರ್, ಸೈದಲವಿ, ರಫೀಕ್, ಅಮೀರ್, ಮುನೀರ್, ಮೊಹಮ್ಮದ್ ಅಲಿ, ಸಲಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.