ಪಾಲಿಬೆಟ್ಟ, ಫೆ. ೨೫: ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿ ಎಂದು ಸರಕಾರ ಹೇಳಿದೆಯಾದರೂ ಅಧಿಕಾರಿಗಳು ಮಾತ್ರ ಕಚೇರಿಗಳಲ್ಲೂ ಇರಲ್ಲ ಗ್ರಾಮಸಭೆಗೂ ಬರಲ್ಲ ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪಲ್ಲ ಎಂದು ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳೇಟಿರ ಕಾಳಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರ ಅಧ್ಯಕ್ಷತೆ ಹಾಗೂ ನೋಡಲ್ ಅಧಿಕಾರಿ ಚಂದ್ರಶೇಖರ್ ಅವರ ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದರು.
ಕುಡಿಯುವ ನೀರು, ರಸ್ತೆ, ಮನೆ, ನಿವೇಶನ, ಕಾಡುಪ್ರಾಣಿಗಳ ಹಾವಳಿ, ರಸ್ತೆಬದಿ ವ್ಯಾಪಾರ, ಬೀಡಾಡಿ ದನಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆದು ಗೊಂದಲದ ವಾತಾವರಣ ಏರ್ಪಟ್ಟಿತು.
ಹಲವು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಜಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ಮನೆ ನಿರ್ಮಿಸಿಕೊಡಲಾಗಿತ್ತು. ನಂತರ ದಿನಗಳಲ್ಲಿ ಕಾರ್ಯಕರ್ತೆ ಮೃತಪಟ್ಟ ಹಿನ್ನೆಲೆಯಲ್ಲಿ ಅಕ್ರಮವಾಗಿ ಖಾಸಗಿ ವ್ಯಕ್ತಿಯೊಬ್ಬರ ಕುಟುಂಬವೊAದು ಇಲ್ಲಿ ವಾಸ ಮಾಡುತ್ತಿದ್ದು, ತೆರವುಗೊಳಿಸ ಬೇಕೆಂಬ ಒತ್ತಾಯ ಕೇಳಿಬಂತು.
ನಿರಂತರ ಕಾಡು ಪ್ರಾಣಿ ಹಾವಳಿಯಿಂದ ಕೃಷಿ ಫಸಲು ನಷ್ಟ ಉಂಟಾಗುತ್ತಿದ್ದು ಕಾರ್ಮಿಕರು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಶಾಶ್ವತವಾಗಿ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕು. ಪಾಲಿಬೆಟ್ಟ ಗ್ರಾಮದಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಕೂಡಲೇ ದೊಡ್ಡಿ ನಿರ್ಮಿಸಿ ನಿಯಂತ್ರಣ ಮಾಡಬೇಕು.
ರಸ್ತೆ ಬದಿಗಳಲ್ಲಿ ಕೆಲವರು ವ್ಯಾಪಾರ ವಹಿವಾಟು ಮಾಡುತ್ತಿದ್ದು ಇದರಿಂದ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಲಕ್ಷಾಂತರ ರೂ ಖರ್ಚು ಮಾಡಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದ್ದರೂ ಯಾರು ಅಲ್ಲಿ ವ್ಯಾಪಾರ ಮಾಡಲು ಮುಂದಾಗುತ್ತಿಲ್ಲ
ರಸ್ತೆ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತಾಗಬೇಕು.
ಪಾಲಿಬೆಟ್ಟ ಸುತ್ತಮುತ್ತಲ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಕೂಡಲೇ ದುರಸ್ತಿಪಡಿಸಬೇಕು. ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಕಾರ್ಯದರ್ಶಿ ಗಂಗಮ್ಮ, ನೀರುಗಂಟಿ ಸುಬ್ರಮಣಿ, ಪೌರಕಾರ್ಮಿಕ ಗೋಪಾಲ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷ ಮಾಳೇಟಿರ ಪವಿತ್ರ, ಸದಸ್ಯರುಗಳಾದ ಪುಲಿಯಂಡ ಬೋಪಣ್ಣ, ನಾಸಿರ್, ವೆಂಕಟೇಶ್, ಲೀಲಾವತಿ, ರೇಖಾ ಗಣಪತಿ, ಅನಿತಾ ರಾಮದಾಸ್, ಸುಮಿತ್ರಾ, ಮಾಜಿ ಸದಸ್ಯ ದೀಪಕ್ ಗಣಪತಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ವಿಜು ಸುಬ್ರಮಣಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಕುಟ್ಟಂಡ ವಸಂತ, ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಗ್ರಾಮಸ್ಥರಾದ ರವೂಫ್, ಫೈಸಲ್, ಬೋಜಮ್ಮ ಹಾಗೂ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.