ಮಡಿಕೇರಿ, ಫೆ. ೨೫: ಕಳೆದ ಕೆಲವು ದಿನಗಳ ಹಿಂದೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ವೃದ್ಧ ಮಹಿಳೆಯರಿಬ್ಬರನ್ನು ಕಟ್ಟಿಹಾಕಿ ದರೋಡೆ ನಡೆಸಿದ್ದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ಗಂಭೀರ ಪ್ರಕರಣವನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ನಗದು ಹಾಗೂ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ನೂತನ ಎಸ್ಪಿ ಎಂ.ಎ. ಅಯ್ಯಪ್ಪ ಅವರು ಕಾರ್ಯಾಚರಣೆ ತಂಡದೊAದಿಗೆ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ಫೆಬ್ರವರಿ ೧ರಂದು ಮಧ್ಯರಾತ್ರಿ ಜಿಲ್ಲೆಯ ಜನರು ಬೆಚ್ಚಿಬೀಳುವಂತಹ ಕೃತ್ಯ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ವಾಸವಿರುವ ನಿವೃತ್ತ ನ್ಯಾಯಾಧೀಶರೂ ಆಗಿರುವ ವಾಂಜAಡ ಬೋಪಯ್ಯ ಅವರ ಸಹೋದರಿಯರಾದ ೭೮ ವರ್ಷ ಪ್ರಾಯದ ಜಾನಕಿ ಮತ್ತು ೬೮ ವರ್ಷದ ಅಮ್ಮಕ್ಕಿ ಎಂಬವರು ಮನೆಯಲ್ಲಿ ಮಲಗಿದ್ದ ಸಂದರ್ಭ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದರು. ಮನೆಬಾಗಿಲು ಮುರಿದು ಒಳ ಪ್ರವೇಶಿಸಿದ್ದ ಆರೋಪಿಗಳು ಸಹೋದರಿಯರಿಬ್ಬರನ್ನು ಕಟ್ಟಿ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದಲ್ಲದೆ, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಚಾಕು ತೋರಿಸಿ ಮಹಿಳೆಯರಿಬ್ಬರನ್ನು ಬೆದರಿಸಿದ್ದಲ್ಲದೆ, ಕಟ್ಟಿ ಹಾಕಿ ದುಷ್ಕೃತ್ಯವೆಸಗಲಾಗಿತ್ತು. ಈ ಘಟನೆಯ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ತಂಡ ರಚನೆ

ಪ್ರಕರಣದ ಗಂಭೀರತೆಯನ್ನು ಅರಿತು ಆಗಿನ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಕ್ಷಮಾ ಮಿಶ್ರಾ ಅವರು, ಘಟನೆಯನ್ನು ಪತ್ತೆಹಚ್ಚಲು ಪ್ರತ್ಯೇಕ ತಂಡವನ್ನು ರಚಿಸಿದ್ದರು. ಆರೋಪಿಗಳ ಪತ್ತೆಗೆ ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಹಾಗೂ ಡಿಸಿಆರ್‌ಬಿ ನಿರೀಕ್ಷಕರ ನೇತೃತ್ವದ ಎರಡು ತಂಡಗಳನ್ನು ರಚಿಸಲಾಗಿತ್ತು.

ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ

(ಮೊದಲ ಪುಟದಿಂದ) ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದು, ನಗದು ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಯಾರು?

ಬಂಧಿತ ಎಲ್ಲಾ ಆರೋಪಿಗಳು ಜಿಲ್ಲೆಯ ಮೂಲದವರಲ್ಲ ಎಂಬುದು ಗಮನಾರ್ಹ. ನೇಪಾಳದವರಾದ, ಜಿಲ್ಲೆಯಲ್ಲಿ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್ ಕೆಲಸದಲ್ಲಿದ್ದ ದಿಲ್ ಬಹದ್ದೂರ್ ರಾವುಲ್ (೫೪), ಈಶ್ವರ್ ಥಾಪಾ (೪೮), ಪ್ರೇಮ್ ಬಹದ್ದೂರ್ ಖಡ್ಕಾ (೩೦), ಸುದೀಪ್ ಜೆತಾರ (೨೦) ಹಾಗೂ ಮನೆ ಕೆಲಸ ಮಾಡುತ್ತಿದ್ದ ಕಮಲ ಸಿಂಗ್ (೩೨) ಎಂಬವರು ಬಂಧಿತ ವ್ಯಕ್ತಿಗಳು. ನಾಲ್ವರು ಪುರುಷರೊಂದಿಗೆ ಕಮಲ ಸಿಂಗ್ ಎಂಬಾಕೆ ಮಹಿಳೆಯಾಗಿದ್ದು, ಈಕೆಯ ಪತಿ ಯಾಮ್ ಸಿಂಗ್, ಜಾನಕಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ಸೂತ್ರಧಾರಿ ಎನ್ನಲಾಗಿದೆ. ಆದರೆ, ಈತ ತಲೆಮರೆಸಿಕೊಂಡಿದ್ದಾನೆ. ಬಂಧಿತರೆಲ್ಲರೂ ರಾಜ್ಯದ ವಿವಿಧೆಡೆ ಅವಿತುಕೊಂಡಿದ್ದು, ಜಿಲ್ಲಾ ಪೊಲೀಸರ ಶ್ರಮದಿಂದಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ.

ವಶಪಡಿಸಿಕೊಂಡ ವಸ್ತುಗಳು

ಆರೋಪಿಗಳಿಂದ ೯೯ ಗ್ರಾಂ ಚಿನ್ನಾಭರಣ ಮತ್ತು ರೂ. ೪೨,೫೦೦ ನಗದು ಹಣ ಸೇರಿದಂತೆ ಒಟ್ಟು ರೂ.೫.೪೨ ಲಕ್ಷ ಮೌಲ್ಯದ ಸ್ವತ್ತನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ತಂಡ

ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಡಿಸಿಆರ್‌ಬಿ ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ, ನಾಪೋಕ್ಲು ಪೊಲೀಸ್ ಠಾಣಾ ಉಪನಿರೀಕ್ಷಕ ಎಂ.ಕೆ. ಸದಾಶಿವ, ಡಿಸಿಆರ್‌ಬಿ ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ನಿರಂಜನ್, ವೆಂಕಟೇಶ್, ಅನಿಲ್ ಕುಮಾರ್, ಸುರೇಶ್, ವಸಂತ, ಶರತ್ ರೈ, ಶಶಿಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತದ ಸಿಬ್ಬಂದಿ ಕಾಳಿಯಪ್ಪ, ಪ್ರೇಮ್ ಕುಮಾರ್, ಶೋಭಾ, ನಾಪೋಕ್ಲು ಪೊಲೀಸ್ ಠಾಣೆಯ ಎಎಸ್‌ಐ ಗೋಪಾಲಕೃಷ್ಣ, ಸಿಬ್ಬಂದಿಗಳಾದ ಸಾಜನ್, ನವೀನ್, ಮಧುಸೂದನ್, ಮಹದೇವ ನಾಯಕ್, ಪಂಚಲಿAಗಪ್ಪ ಸುತ್ತಿಗೇರಿ, ರೇಖಾ ಡಿ., ರೇಷ್ಮ, ಭಾಗಮಂಡಲ ಪೊಲೀಸ್ ಠಾಣೆಯ ಇಬ್ರಾಹಿಂ, ನಂಜುAಡ ಮತ್ತು ಮಡಿಕೇರಿ ಸಂಚಾರಿ ಠಾಣೆಯ ವಿನೋದ್ ಮತ್ತು ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಮತ್ತು ಪ್ರವೀಣ್ ಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಇವರ ಕಾರ್ಯ ವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.