ಕರಿಕೆ, ಫೆ. ೨೫: ಕಾಡ್ಗಿಚ್ಚು ತಡೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಮತ್ತು ಜಲಮಾಲಿನ್ಯ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನವನ್ನು ಮಡಿಕೇರಿ ವನ್ಯಜೀವಿ ವಿಭಾಗ ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಡಿ.ಎಸ್. ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎಲ್ಲಾ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಬೆಟ್ಟದಳ್ಳಿ ಶಾಂತಿ ಮಲ್ಲಿಕಾರ್ಜುನ ಶಾಲೆ, ಪ್ರಾಥಮಿಕ ಶಾಲೆ, ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಐಗೂರು ಪದವಿಪೂರ್ವ ಕಾಲೇಜು, ಮಾದಾಪುರ ಸರ್ಕಾರಿ ಪ್ರೌಢಶಾಲೆ ಮತ್ತು ಮಾಂದಲಪಟ್ಟಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಅವರು ಪ್ರಕೃತಿ ನಾಶ, ಜಲಮಾಲಿನ್ಯ ನಿಯಂತ್ರಣದಲ್ಲಿ ಮಕ್ಕಳ ಪಾತ್ರ ಮತ್ತು ಬೆಂಕಿಯಿAದ ಅರಣ್ಯ ಸಂರಕ್ಷಣೆ ಮಾಡುವ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.

ಕುಶಾಲನಗರದ ಕಲಾವಿದ ರಾಜು ಮತ್ತು ತಂಡದವರು ಅರಿವಿನ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಣೇಶ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.