ಮಡಿಕೇರಿ, ಫೆ. ೨೫: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಜಾರಿ ಹಾಗೂ ಎನ್.ಪಿ.ಎಸ್. ರದ್ದುಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ಮನವಿ ಮಾಡಲಾಗಿದೆ ಎಂದು ಕೊಡಗು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ ತಿಳಿಸಿದ್ದಾರೆ.

೨೦೨೨-೨೩ ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಮಂತ್ರಿಗಳೊAದಿಗೆ ಅಂಕಿ- ಅಂಶಗಳ ಸಮೇತ ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಪರಿಷ್ಕರಣೆಗಾಗಿ 'ಅಧಿಕಾರಿಗಳ ವೇತನ ಸಮಿತಿ' ರಚಿಸಲು ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಆಯವ್ಯಯದಲ್ಲಿ ಪ್ರಸ್ತಾಪಿಸುವ ಭರವಸೆಯನ್ನು ನೀಡಿದರು.

ಇತ್ತೀಚಿಗೆ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಘೋಷಿಸಿದ್ದು , ಅದರಂತೆ ಅಧ್ಯಯನ ನಡೆಸಿ ಒ.ಪಿ.ಎಸ್. ಜಾರಿಗೆ ತರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ, ನೌಕರರ ಮೇಲಿನ ಹಲ್ಲೆಗಳನ್ನು ನಿಯಂತ್ರಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತಂದು ಜಾಮೀನುರಹಿತ ಬಂಧನದAತಹ ಕಠಿಣ ಕಾನೂನನ್ನು ಜಾರಿಗೆ ತರುವ ಭರವಸೆ ನೀಡಿದರು.

ನೌಕರರುಗಳ ತರಬೇತಿಗಾಗಿ ೬ ಜಿಲ್ಲಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅನುಭವಿ ವಿಷಯ ತಜ್ಞರನ್ನು ನೇಮಿಸುವ ಮೂಲಕ ಪುನಶ್ಚೇತನಗೊಳಿಸುವ ಭರವಸೆ ನೀಡಿದರು.

ಈ ಸಭೆಯಲ್ಲಿ ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರಾದ ಪಿ.ಹೇಮಲತ ಅವರು ಉಪಸ್ಥಿತರಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.