ಸಿದ್ದಾಪುರ, ಫೆ ೨೫: ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳು ಇತರ ಕಟ್ಟಡಗಳು ಸೇರಿ ರೂ ೨ ಕೋಟಿ ವೆಚ್ಚದ ಕಾಮಗಾರಿ ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಭೂಮಿ ಪೂಜೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು ನೆಲ್ಯಹುದಿಕೇರಿಯಲ್ಲಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಒಂದೇ ಜಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೂ ೨ ಕೋಟಿ ವೆಚ್ಚದಲ್ಲಿ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಹಾಗೂ ಗ್ರಂಥಾಲಯಗಳನ್ನು ನಿರ್ಮಿಸಲು ಚಾಲನೆ ನೀಡಲಾಗಿದೆ ಎಂದರು. ಪ್ರತಿ ಗ್ರಾ.ಪಂ ಯ ಕಚೇರಿಗಳಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ಮೂಲಕ ಗ್ರಾಮಒನ್ ನಾಗರಿಕ ಸೇವಾ ಕೇಂದ್ರವನ್ನು ತೆರೆಯಲು ಸರ್ಕಾರ ಆದೇಶ ನೀಡಿದೆ ಎಂದು ಮಾಹಿತಿ ನೀಡಿದರು.
ಗ್ರಾಮಒನ್ ಸೇವಾಕೇಂದ್ರದಿAದಾಗಿ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಇತರ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯದಲ್ಲೇ ನೆಲ್ಯಹುದಿಕೇರಿಯ ಗ್ರಾ.ಪಂ ಕಚೇರಿಯಲ್ಲಿ ಗ್ರಾಮಒನ್ ಸೇವೆಯನ್ನು ಪ್ರಾರಂಭಿಸಲಾಗುವುದನ್ನು ನೆಲ್ಯಹುದಿಕೇರಿಯ ಗ್ರಾ.ಪಂ ವ್ಯಾಪ್ತಿಯಲ್ಲಿ ೨೦೦ಕ್ಕೂ ಅಧಿಕ ಏಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ಇದನ್ನು ಸರ್ಕಾರವು ಮುಂದಿನ ದಿನಗಳಲ್ಲಿ ಒತ್ತುವರಿದಾರರಿಂದ ತೆರವುಗೊಳಿಸಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಜಾಗ ಗುರುತಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಂಚಾಯಿತಿಯ ನೂತನ ಡಿಜಿಟಲ್ ಗ್ರಂಥಾಲಯ ನಿರ್ಮಾಣದ ಕಟ್ಟಡಕ್ಕೆ ಭೂಮಿಪೂಜೆ ನಿರ್ಮಿಸಿದರು.
‘ಶಕ್ತಿ’ ವರದಿಗೆ ಸ್ಪಂದಿಸಿದ ಶಾಸಕರು: ನೆಲ್ಯಹುದಿಕೇರಿಯ ನದಿತೀರದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಅರೆಕಾಡುವಿನಲ್ಲಿ ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡದೇ ಸಮಸ್ಯೆಯಾಗಿದೆಂದು ೨೩ ರಂದು ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಶಾಸಕರು ಸಂತ್ರಸ್ತರಿಗೆ ಪುನರ್ವಸತಿ ಮಾಡುವ ಜಾಗದಲ್ಲಿ ಸೇತುವೆ ನಿರ್ಮಾಣಕ್ಕೆ ರೂ. ೨೫ ಲಕ್ಷ ಅನುದಾನದಲ್ಲಿ ಕಾಮಗಾರಿಯನ್ನು ಸದ್ಯದಲ್ಲೇ ಮಾಡಲಾಗುವುದೆಂದು ತಿಳಿಸಿದರು. ಅಲ್ಲದೇ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಕೊರೊನಾದಿಂದಾಗಿ ಸಂತ್ರಸ್ತರ ಪುನರ್ವಸತಿ ಯೋಜನೆ ವಿಳಂಬವಾಗಿದೆAದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್, ಉಪಾಧ್ಯಕ್ಷೆ ಧಮಯಂತಿ, ಪಿಡಿಓ ಅನಿಲ್ ಕುಮಾರ್, ಶಾಲಾಭಿವೃದ್ಧಿ ಉಪಾಧ್ಯಕ್ಷ ಪಾಲಚಂಡ ಅಚ್ಚಯ್ಯ, ಗ್ರಾ.ಪಂ ಸದಸ್ಯರುಗಳು ಹಾಗೂ ಶಕ್ತಿ ಕೇಂದ್ರದ ಪ್ರಮುಖರಾದ ಬೆಳ್ಯಪ್ಪ, ಪದ್ಮನಾಭ, ಇಂಜಿನಿಯರ್ ಪೀಟರ್, ಗುತ್ತಿಗೆದಾರ ಶ್ರೀನಿವಾಸ್ ಇನ್ನಿತರರು ಹಾಜರಿದ್ದರು.
-ಚಿತ್ರ, ವರದಿ: ವಾಸು ಎ.ಎನ್