ಮಡಿಕೇರಿ, ಫೆ. ೨೩ : ಮಡಿಕೇರಿ ನಗರದಲ್ಲಿ ಭೂಗಳ್ಳರ ಹಾವಳಿ ಮಿತಿ ಮೀರಿದ್ದು, ಪ್ರಮುಖ ಪ್ರದೇಶಗಳಲ್ಲಿ ಅಕ್ರಮ ಬೇಲಿ ಮತ್ತು ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ.

ಕೊರವೇ ಮಡಿಕೇರಿ ನಗರ ಘಟಕದ ಅಧ್ಯಕ್ಷ ಚೊಟ್ಟೆಯಂಡ ಶರತ್, ಕಾರ್ಯಾಧ್ಯಕ್ಷ ಮಹೇಶ್ ಹಾಗೂ ನಗರ ಉಸ್ತುವಾರಿ ಎಂ.ವೈ. ಸುಲೇಮಾನ್ ಅವರುಗಳು ಜಂಟಿ ಯಾಗಿ ಪತ್ರಿಕಾ ಪ್ರಕಟಣೆ ನೀಡಿ ನಗರಸಭೆ ಅಕ್ರಮ ಒತ್ತುವರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನಗರಸಭಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ಪ್ರಭಾವಿಗಳು ಕಬಳಿಕೆ ಮಾಡಿ ಬೇಲಿ ನಿರ್ಮಿಸಿ ಕೊಂಡಿದ್ದಾರೆ. ಅಲ್ಲದೆ ವಿವಿಧೆಡೆ ನಿಯಮ ಬಾಹಿರ ಕಟ್ಟಡಗಳು ತಲೆ ಎತ್ತಿವೆ. ನಗರಸಭೆಯ ಮೂಗಿನ ನೇರಕ್ಕೇ ಅಕ್ರಮ ನಡೆಯುತ್ತಿದ್ದರೂ ಮತ್ತು ನಗರದ ಹೃದಯ ಭಾಗದಲ್ಲೇ ಸರ್ಕಾರಿ ಜಾಗ ಒತ್ತುವರಿ ಮಾಡಿ ಬೇಲಿ ನಿರ್ಮಿಸಿದ್ದರೂ ಆಡಳಿತ ವ್ಯವಸ್ಥೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.