ಕೂಡಿಗೆ, ಫೆ. ೨೪: ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳು ಹಾಗೂ ಡಿಸ್ಟಿçಬ್ಯೂಟರ್ ಗಳನ್ನು ಆಧುನೀಕರಣಗೊಳಿಸಲು ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಸರ್ಕಾರವನ್ನು ಆಗ್ರಹಿಸಿದರು. ಸಮೀಪದ ಹಾರಂಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ನೀರು ಬಳಕೆದಾರರ ಮಹಾ ಮಂಡಳದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಕಡೆಗಳಲ್ಲಿ ನಾಲೆಗಳು ಹಾಗೂ ಡಿಸ್ಟಿçಬ್ಯೂಟರ್‌ಗಳು ಹಾನಿಯಾಗಿದ್ದು, ನೀರು ಪೋಲಾಗುತ್ತಿದೆ. ಅದೇ ನಾಲೆಗಳಲ್ಲಿ ಹೂಳು ತುಂಬಿವೆ. ಈ ಎಲ್ಲಾ ಕಾಮಗಾರಿಗಳಿಗೆ ಏಪ್ರಿಲ್ ಅಥವಾ ಮೇ ತಿಂಗಳ ಒಳಗೆ ಅನುದಾನವನ್ನು ಒದಗಿಸಿಕೊಟ್ಟು, ಜೂನ್ ನಲ್ಲಿ ಹೂಳು ತೆಗೆಯುವ ಕಾರ್ಯವನ್ನು ಪೂರ್ಣಗೊಳಿಸಿ ಕೊನೆಯ ಹಂತದ ರೈತರಿಗೆ ನೀರು ತಲುಪುವಂತೆ ಮಾಡಬೇಕು ಎಂದರು.

ಈಗಾಗಲೇ ಹಾರಂಗಿ ಜಲಾಶಯ ಹೂಳು ತೆಗೆಯಲು ರೂ. ೧೩೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನದಲ್ಲಿ ಕೇವಲ ಹೂಳು ತೆಗೆಯುವ ಕಾರ್ಯ ಮಾತ್ರ ಅಲ್ಲದೆ ಕಿರು ಸೇತುವೆ, ಬಂಡ್ ನಿರ್ಮಾಣ, ರೈತರ ಜಮೀನು ಮುಳುಗಡೆ ಯಾಗುತ್ತಿರುವ ಜಾಗಗಳಲ್ಲಿ ತಡೆಗೋಡೆ ಹಾಗೂ ಸಮರ್ಪಕ ಸೇತುವೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಒಳಗೊಂಡಿವೆ. ಆದರೆ ಎಲ್ಲಾ ಅನುದಾನವನ್ನು ಹೂಳು ತೆಗೆಯಲು ಬಳಸಲಾಗುತ್ತದೆ ಎಂದು ತಪ್ಪು ತಿಳುವಳಿಕೆ ಜನರಿಗೆ ಇದೆ ಎಂದರು.

ಕಳೆದ ಜ. ೨೦ ರಂದು ಬೆಂಗಳೂರಿನಲ್ಲಿ ನೀರಾವರಿ ಸಚಿವರು, ಅಚ್ಚುಕಟ್ಟು ವ್ಯಾಪ್ತಿಯ ಶಾಸಕರು ಹಾಗೂ ಸಂಸದರ ಸಭೆಯಲ್ಲಿ ರೈತರ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುವ ದೃಷ್ಟಿಯಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಸೂಚನೆ ನೀಡಲಾಗಿದೆ. ಇದೇ ತಿಂಗಳ ೨೮ ರಿಂದ ಹಾರಂಗಿ ಎಡದಂಡೆ ಹಾಗೂ ಬಲದಂಡೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳಿಗೆ ತುಂಬಿಸಲಾಗುತ್ತದೆ ಎಂದರು. ೨೦ ದಿನಗಳು ಮಾತ್ರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ರೈತರು ನೀರನ್ನು ಪೋಲು ಮಾಡದೆ ಕೆರೆಗಳನ್ನು ತುಂಬಿಸಿಕೊಳ್ಳಬೇಕು. ಈ ನೀರಿನಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ರೈತರು ತರಕಾರಿಗಳನ್ನು ಮಾತ್ರ ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಉಪಾಧ್ಯಕ್ಷ ಕೆ.ವಿ. ನವೀನ್ ಕುಮಾರ್, ನಿರ್ದೇಶಕರಾದ ಎಸ್.ಪಿ. ರಾಜು, ಕೆ.ಎಸ್. ಕಲ್ಯಾಣಪ್ಪ, ಹೆಚ್.ಎನ್ ಮಂಜುನಾಥ್, ಎಂ. ದೇವರಾಜು, ಹೆಚ್.ಎಸ್. ಹರೀಶ್, ಎಂ. ಮಹಾದೇವ್, ಹೆಚ್.ಟಿ. ದಿನೇಶ್, ಕೆ.ಕೆ. ಮುಕ್ತರ್‌ಪಾಷ, ಹೆಚ್.ಎಂ. ಸೋಮೇಶ್, ಬಿ.ಆರ್. ಕುಮಾರ್, ಎ.ಟಿ. ರಮೇಶ್, ಎಸ್.ಎಸ್. ಮಹಾದೇವ್, ಭಾಗ್ಯ, ಇಲಾಖೆಯ ತಾಂತ್ರಿಕ ಅಧಿಕಾರಿ ಪುಷ್ಪಲತಾ, ಸಂಘದ ಕಾರ್ಯದರ್ಶಿ ಚಂದ್ರಪ್ಪ ಉಪಸ್ಥಿತರಿದ್ದರು.