ಕಣಿವೆ, ಫೆ. ೨೪: ಕಳೆದ ಎಂಟು ವರ್ಷಗಳ ಹಿಂದೆ ‘ಡ್ವಾರ್ಫ್’ ಎಂಬ ವಿನೂತನ ಕಾಫಿ ತಳಿಯನ್ನು ನೆಟ್ಟು ಬೆಳೆಸಿ ಯಶಸ್ಸು ಕಂಡಿದ್ದ ಹಾರಂಗಿ ಸಮೀಪದ ಅತ್ತೂರು ಗ್ರಾಮದ ಪ್ರಗತಿಪರ ಕೃಷಿಕ ಜರ್ಮಿ ಡಿಸೋಜ ಇದೀಗ ಮತ್ತೊಂದು ಕೃಷಿಗೆ ಕೈ ಹಾಕಿ ಯಶಸ್ವಿಯಾಗುತ್ತಿದ್ದಾರೆ.
‘ನೆಲ್ಯಾಣಿ ಗ್ರೀನ್ ಗೋಲ್ಡ್' ಎಂಬ ಏಲಕ್ಕಿ ತಳಿಯನ್ನು ಬಯಲುಸೀಮೆಯ ವಾತಾವರಣ ಇರುವ ಅತ್ತೂರಿನ ತಮ್ಮ ತೋಟದಲ್ಲಿ ತಂದು ನೆಟ್ಟು ಅದರಿಂದಲೂ ‘ಸೈ' ಎನಿಸಿಕೊಂಡಿದ್ದಾರೆ.
ಏಲಕ್ಕಿ ಬೆಳೆಗೆಂದೇ ಜಿಲ್ಲೆಯಲ್ಲಿ ಹೆಸರಾಗಿದ್ದ ಸೂರ್ಲಬ್ಬಿ ನಾಡಿನ ಗರ್ವಾಲೆ ಗ್ರಾಮದ ನಾಪಂಡ ಪೂಣಚ್ಚ ಎಂಬವರ ತೋಟದಲ್ಲಿ ಬುಡವೊಂದಕ್ಕೆ ನೂರು ರೂಪಾಯಿಯಂತೆ ನೂರು ಬುಡಗಳನ್ನು ತಂದು ತಮ್ಮ ಅಡಿಕೆ ತೋಟದಲ್ಲಿ ನೆಟ್ಟಿದ್ದರು.
ಇದೀಗ ವರ್ಷ ಕಳೆಯುವುದರೊಳಗೆ ಆ ನೂರು ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು ‘ಫಲ' ಕೊಡಲಾರಂಭಿಸಿವೆ. ಇದೀಗ ಮತ್ತೆ ಇದೇ ಫಲಭರಿತ ಏಲಕ್ಕಿ ಗಿಡಗಳ ಬುಡಗಳಿಂದ ಎಂಟುನೂರು ಗಿಡಗಳನ್ನು ಕಸಿ ಮಾಡಿ ಮತ್ತೆ ಹೊಸದಾದ ಪ್ರತ್ಯೇಕವಾದ ಒಂದು ಎಕರೆ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ.
ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿರುವ ಪ್ರಗತಿ ಪರ ಕೃಷಿಕ ಜರ್ಮಿ ಡಿಸೋಜ, ಕೇವಲ ತಂಪು ವಾತಾವರಣದಲ್ಲಿ ಬೆಳೆಯುವ ಏಲಕ್ಕಿಯನ್ನು ಒಂದಷ್ಟು ಉಷ್ಣ ವಾತಾವರಣವಿರುವ ಬಯಲು ಸೀಮೆಯ ವಾತಾವರಣದಲ್ಲಿ ಏಕೆ ಬೆಳೆಯಬಾರದು ಎಂದುಕೊAಡು ಮತ್ತೊಂದು ಹೊಸ ಸಾಹಸ ಪ್ರಯೋಗಕ್ಕೆ ಕೈ ಹಾಕಿ ಅಲ್ಲಿಯೂ ಯಶಸ್ಸು ಕಂಡಿರುವುದು ಸುತ್ತಮುತ್ತಲಿನ ಕೃಷಿಕರಿಗೆ ಅಚ್ಚರಿ ಉಂಟು ಮಾಡಿದೆ.
ನೆಲ್ಯಾಣಿ ಗ್ರೀನ್ ಗೋಲ್ಡ್ ಎಂಬ ಏಲಕ್ಕಿ ಬೆಳೆಯನ್ನು ಸಾಮಾನ್ಯವಾಗಿ ಕೇರಳದ ತಂಪು ಪ್ರದೇಶವಾದ ಇಡುಕಿ ಎಂಬ ಜಿಲ್ಲೆಯ ನೆಲ್ಯಾಣಿ ಎಂಬಲ್ಲಿ ಬೆಳೆಯುತ್ತಾರೆ. ಹಾಗೆಯೇ ಕೊಡಗಿನ ಸೂರ್ಲಬ್ಬಿ ನಾಡಿನಲ್ಲೂ ಹಿಂದೆ ಏಲಕ್ಕಿ ಭಾರೀ ಹೆಸರುವಾಸಿಯಾಗಿತ್ತು. ಕ್ರಮೇಣ ಈ ಬೆಳೆ ಕ್ಷೀಣಿಸಿತು. ಇದೀಗ ಈ ಬೆಳೆಯನ್ನು ಸಾಮಾನ್ಯವಾಗಿ ಎಲ್ಲಾ ರೈತರು ಎಲ್ಲಾ ವಾತಾವರಣದಲ್ಲೂ ಬೆಳೆಯಬಹುದು ಎಂಬುದಕ್ಕೆ ಕೃಷಿಕ ಜರ್ಮಿ ಡಿಸೋಜ ಅವರ ಪ್ರಯೋಗ ಅನುಕರಣೀಯವಾಗಿದೆ.
ಹಾಗಾಗಿ ಈಗಾಗಲೇ ನಮಗೂ ಏಲಕ್ಕಿ ಬಿತ್ತನೆ ಮಾಡಲು ಬುಡಗಳನ್ನು ಕೊಡಿ ಎಂಬ ಬೇಡಿಕೆಗಳು ಗ್ರಾಮದ ಸುತ್ತಲಿನ ಕೃಷಿಕರಿಂದ ಬರಲಾರಂಭಿಸಿವೆ. ಈ ಹಿಂದೆ ಅತೀ ಕಡಿಮೆ ಅವಧಿಗೆ ಫಸಲು ನೀಡುವ ಡ್ವಾರ್ಫ್ ಎಂಬ ಹೊಸ ಕಾಫಿ ಗಿಡಗಳನ್ನು ತಂದು ಕೃಷಿ ಮಾಡಿ ಖುಷಿಯ ಜೊತೆಗೆ ಆದಾಯವನ್ನು ಗಳಿಸಿದ್ದ ಈ ಜರ್ಮಿ ಡಿಸೋಜ ಅವರ ಬಳಿ ಡ್ವಾರ್ಫ್ ಕಾಫಿ ಬಿತ್ತನೆ ಬೀಜವನ್ನು ತಮ್ಮ ತೋಟಗಳಲ್ಲಿ ಬಿತ್ತನೆ ಮಾಡಲು ರಾಜ್ಯದ ಬೇರೆ ಬೇರೆ ಭಾಗದ ಹತ್ತಾರು ಜಿಲ್ಲೆಗಳ ಕೃಷಿಕರು ಧಾವಿಸಿದ್ದರು. ಹಾಗೆಯೇ ಈ ಕಾಫಿ ಫಸಲು ನಿರ್ವಹಣೆ ಬಗ್ಗೆ ಜರ್ಮಿಡಿಸೋಜ ಅವರಿಂದ ಮಾಹಿತಿ ಯನ್ನು ಪಡೆದು ಯಶಸ್ವಿ ಯಾದ ಕೃಷಿಕ ಸಮುದಾಯವೇ ಬೇರೆ ಇದೆ. ಈ ಮಧ್ಯೆ ನೆಲ್ಯಾಣಿ ಗ್ರೀನ್ ಗೋಲ್ಡ್ ಎಂಬ ಮತ್ತೊಂದು ಹೊಸ ತಳಿಯನ್ನು ತಂದು ನೆಟ್ಟು ನಿರ್ವಹಿಸಿ ಫಸಲು ತೆಗೆಯುತ್ತಿರುವ ಈ ಕೃಷಿಕ ಜರ್ಮಿ ಅವರ ಕೃಷಿ ಕ್ಷೇತ್ರ ಸುತ್ತಲಿನ ಕೃಷಿಕ ಕುಲಕ್ಕೆ ಒಂದು ರೀತಿ ತೋಟಗಾರಿಕಾ ಕ್ಷೇತ್ರವಾಗಿದೆ.
ಇನ್ನು ಈ ತೋಟ ಮಾಲೀಕ ಜರ್ಮಿ ಡಿಸೋಜ ಒಂದು ರೀತಿ ಕೃಷಿ ಪಂಡಿತರ ರೀತಿಯಲ್ಲಿದ್ದು, ಎಲ್ಲಾ ಕೃಷಿಕರು ಕೃಷಿಯಲ್ಲಿ ಸ್ವಾವಲಂಬನೆ ಮಾಡುವ ಮೂಲಕ ಆರ್ಥಿಕವಾಗಿ ಸಶಕ್ತರಾಗಬೇಕು ಎಂದು ಆಶಿಸುತ್ತಾರೆ.
ಕಳೆದ ಬಾರಿ ಮಾರುಕಟ್ಟೆಯಲ್ಲಿ ಗರಿಷ್ಠ ಅಂದರೆ ಕೆ.ಜಿ. ಒಂದಕ್ಕೆ ೪ ಸಾವಿರ ರೂಪಾಯಿಗಳಿಗೆ ಏಲಕ್ಕಿ ಧಾರಣೆ ಇತ್ತು. ಕನಿಷ್ಟ ೧೦೦೦ ರೂಪಾಯಿಗಳಿಗೆ ಇದರ ಬೆಲೆ ಇಳಿಕೆಯಾಗಲ್ಲ. ಹಾಗಾಗಿ ಈ ನೆಲ್ಯಾಣಿ ಗ್ರೀನ್ ಗೋಲ್ಡ್ ಎಂಬ ತಳಿಯ ಏಲಕ್ಕಿ ಒಂದು ರೀತಿಯಲ್ಲಿ ಆದಾಯ ತರುವ ಬೆಳೆಯಾಗಿದೆ. ಹಾಗೆಯೇ ಯಾವುದೇ ಬೆಳೆಯಾದರೂ ಕೂಡ ಬಿತ್ತನೆಯಿಂದ ಫಸಲು ಬಿಡುವ ತನಕ ಮಗು ತರಹ ಆರೈಕೆ ಮಾಡಬೇಕು. ಪ್ರತಿ ದಿನವೂ ಇದರ ಜೊತೆಗಿದ್ದು ಎಲ್ಲವನ್ನು ಪರಾಮರ್ಶೆ ಮಾಡುತ್ತಿರಬೇಕು. ಒಂದು ರೀತಿಯಲ್ಲಿ ನಾವು ಮಾಡುವ ಯಾವುದೇ ಕೃಷಿ ಕಾಯಕದಲ್ಲಿ ಭಾವನಾತ್ಮಕವಾದ ಸಂಬAಧ ಹಾಗೂ ಸಂವೇದನೆ ಇರಬೇಕು. ಆ ಗಿಡಗಳಿಗೆ ಸಕಾಲಿಕವಾಗಿ ನೀರು - ಗೊಬ್ಬರಗಳನ್ನು ಕೊಡುವ ಮೂಲಕ ಗಿಡಗಳ ಜೊತೆ ನಾವು ಮಾತಾಡುವಂತಿರಬೇಕು. ಹಾಗಿದ್ದಾಗ ಮಾತ್ರ ಅದು ನಮ್ಮ ಕೈ ಹಿಡಿಯುತ್ತದೆ. ನಮ್ಮ ಕೈ ಬಲಪಡಿಸುತ್ತದೆ ಎನ್ನುತ್ತಾರೆ ಜರ್ಮಿ.
- ಕೆ.ಎಸ್. ಮೂರ್ತಿ, ಕುಶಾಲನಗರ