ವೀರಾಜಪೇಟೆ, ಫೆ. ೨೪: ಕಾಂಗ್ರೆಸ್ ಪಕ್ಷವು ಜಾತ್ಯತೀತ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ನೆಲೆ ನಿಂತಿದೆ. ಸರ್ವರು ಸಮಾನರು ಎನ್ನುವ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದರಾದ ಧ್ರುವ ನಾರಾಯಣ್ ಅವರು ಹೇಳಿದರು.

ವೀರಾಜಪೇಟೆ ಮತ್ತು ಪೊನ್ನಂಪೇಟೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಘಟಕದಿಂದ ನಗರದ ಗಣಪತಿ ಆರ್ಕೇಡ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನ ತರಬೇತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ೧೨ ವರ್ಷಗಳಿಂದ ಪಕ್ಷದಲ್ಲಿ ಯಾವುದೇ ಸದಸ್ಯತ್ವ ಕಾರ್ಯಕ್ರಮ ನಡೆದಿಲ್ಲ. ಇದೀಗ ಪಕ್ಷದ ಕೇಂದ್ರೀಯ ವರಿಷ್ಟರ ಆದೇಶದ ಮೇರೆಗೆ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಡಿಜಿಟಲ್ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ತಳಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ನೀಡಿ ಬೂತ್ ಮಟ್ಟದಲ್ಲಿ ಸದೃಢವಾದ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮವಾಗಿದೆ. ನೋಂದಣಿ ಗಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಯುವಕ ಯುವತಿಯರನ್ನು ಸದಸ್ಯತ್ವಕ್ಕೆ ಪ್ರೇರೇಪಿಸಬೇಕೆಂದರು.

ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮಾತನಾಡಿ, ವರಿಷ್ಟರ ಆದೇಶದಂತೆ ಜಿಲ್ಲೆಯಲ್ಲಿ ನಾಲ್ಕು ಭಾಗಗಳಲ್ಲಿ ಜಿಲ್ಲಾ ಪಂಚಾಯಿತಿ ತಾಲೂಕು ಮತ್ತು ವಲಯ ಮಟ್ಟದ ನಾಯಕರುಗಳಿಗೆ ಸದಸ್ಯತ್ವ ನೋಂದಣಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು ನುರಿತ ಸದಸ್ಯರನ್ನು ಆಯ್ಕೆಗೊಳಿಸಿ ತರಬೇತಿ ನೀಡಿ ಸದಸ್ಯತ್ವ ನೋಂದಣಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಯಕರು ಪಕ್ಷದ ಸಂಘಟನೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಚಾಮರಾಜನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸದಸ್ಯತ್ವ ಅಭಿಯಾನದ ತರಬೇತಿದಾರರಾದ ನವೀನ್ ಅವರು ಸಭೆಯಲ್ಲಿ ಹಾಜರಿದ್ದ ಸದಸ್ಯತ್ವ ನೋಂದಾಣಿಗಾರರಿಗೆ ಸದಸ್ಯತ್ವ ಅಭಿಯಾನದ ಕ್ರಮಗಳನ್ನು ವಿವರಿಸಿದರು.

ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದಿರಿರ ನವೀನ್, ಕೆ.ಪಿ.ಸಿ.ಸಿ ಮಾಜಿ ಪ್ರಧಾನ ಕಾರ್ಯದರ್ಶಿ ಕಾವೇರಪ್ಪ, ಕೊಡಗು ಜಿಲ್ಲಾ ಉಸ್ತುವಾರಿಗಳಾದ ಸೀತಾರಾಂ, ಪಕ್ಷದ ಪ್ರಮುಖರಾದ ಹೇಮನಾಥ್ ಶೆಟ್ಟಿ, ಮಾಜಿ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ್ ಮತ್ತು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಾದಂಡ ಪಿ.ತಿಮ್ಮಯ್ಯ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ, ರಾಜ್ಯ ಸೇವಾದಳ ಪ್ರಧಾನ ಕಾರ್ಯದರ್ಶಿ ತೇರೆಜಾ ವಿಕ್ಟರ್, ರಾಜ್ಯ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಲೋಹಿತ್ ಗೌಡ, ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು. ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ