ಮಡಿಕೇರಿ, ಫೆ. ೨೪ : ಚೇರಳ ಗೌಡ ಸಂಘದ ವತಿಯಿಂದ ಗೌಡ ಕುಟುಂಬಗಳ ನಡುವೆ ಮಾ.೨೫, ೨೬ ಹಾಗೂ ೨೭ ರಂದು ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ‘ಚೇರಳ ಗೌಡ ಕಪ್’ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡ ಕುಟುಂಬಗಳ ನಡುವೆ ಮೂರು ದಿನಗಳ ಕಾಲ ೫+೨ ಆಟಗಾರರ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೨೨,೨೨೨ ರೂ., ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೫,೫೫೫ ರೂ., ತೃತೀಯ ಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ ರೂ. ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ೫,೫೫೫ ರೂ.ನಗದು ಬಹುಮಾನಗಳೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದೆಂದರು.
ಭಾಗವಹಿಸುವ ತಂಡಗಳು ಮಾ.೧೮ರ ಒಳಗೆ ಮೈದಾನ ಶುಲ್ಕ ೨ ಸಾವಿರ ರೂ.ಗಳನ್ನು ನೀಡಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ಯುವ ಬ್ರಿಗೇಡ್ ಸಮಿತಿಯ ಕಾರ್ಯದರ್ಶಿ ಪೇರಿಯನ ಉದಯ ಮಾತನಾಡಿ, ಸಂಘದ ಯುವ ಬ್ರಿಗೇಡ್ ಸಮಿತಿ ಮತ್ತು ಕ್ರೀಡಾ ಸಮಿತಿಯವರು ಫುಟ್ಬಾಲ್ ಪಂದ್ಯಾವಳಿ ಆಯೋಜನೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರತಿ ತಂಡಕ್ಕೆ ನೀಡಲಾಗುವ ನಿಯಮ ಮತ್ತು ನಿಬಂಧನೆಗೊಳಪಟ್ಟು ಎಲ್ಲಾ ತಂಡಗಳು ಭಾಗವಹಿಸಬೇಕಾಗುತ್ತದೆ. ಯಾವುದೇ ತಕರಾರುಗಳಿದ್ದಲ್ಲಿ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ೯೯೦೧೨೩೭೯೦೦, ೮೧೯೭೨೯೭೫೧೬, ೯೪೮೧೯೪೬೦೭೬ ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಅಜೀರ ಧನಂಜಯ, ಖಜಾಂಚಿ ಮುಕ್ಕಾಟಿ ಪಳಂಗಪ್ಪ, ಯುವ ಬ್ರಿಗೇಡ್‌ನ ಖಜಾಂಚಿ ಮರದಾಳು ತೇಜಸ್, ಸದಸ್ಯ ಚೇತನ್ ಉಪಸ್ಥಿತರಿದ್ದರು.