ಕೀವ್, ಫೆ. ೨೪: ನ್ಯಾಟೋಗೆ ಉಕ್ರೇನ್ ಸೇರ್ಪಡೆ ವಿರೋಧಿಸಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಘಟನೆಯಲ್ಲಿ ೮ ಮಂದಿ ಮೃತಪಟ್ಟಿದ್ದು, ೯ ಮಂದಿ ಗಾಯಗೊಂಡಿದ್ದಾರೆ. ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಉಕ್ರೇನ್ ಗಡಿ ದಾಟಿ ಜೆರ್ನಿಹಿಮ್, ಖರ್ಕೈವ್ ಮತ್ತು ಲುಹಾನ್ಸ್ಕ್ ಪ್ರಾಂತ್ಯವನ್ನು ಪ್ರವೇಶಿಸಿವೆ ಎಂದು ಗಡಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಉಕ್ರೇನ್ ವಾಯು ಪ್ರದೇಶ ಬಂದ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಗುರುವಾರ ಘೋಷಿಸಿದ್ದಾರೆ, ಅದರಂತೆ ರಷ್ಯಾ ಸೇನೆಯ ಭೂ ಮತ್ತು ವಾಯುಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸುತ್ತಿವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆಯ ನಂತರ ಪರಸ್ಪರ ಬಾಂಬ್ ದಾಳಿ ಆರಂಭವಾಗಿವೆ. ರಷ್ಯಾ ಕೆಲವು ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸಿದ್ದು, ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಉಕ್ರೇನ್ ಪಡೆಗಳ ಕಮಾಂಡ್ ಪ್ರಕಾರ, ಫೆಬ್ರವರಿ ೨೪ರಂದು ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಸೇನಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಹೇಳಿಕೆಯನ್ನು ಸಾರಾಸಾಗಟಾಗಿ ನಿರಾಕರಿಸಿರುವ ರಷ್ಯಾ, ಉಕ್ರೇನಿಯನ್ ವಾಯುನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಉಕ್ರೇನ್ ರಷ್ಯಾದೊಂದಿಗೆ ರಾಜತಾಂತ್ರಿಕ ಸಂಬAಧಗಳನ್ನು ಮುರಿದುಕೊಂಡಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಿಳಿಸಿರುವುದಾಗಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯಾವುದೇ ಕಾರಣಕ್ಕೂ ರಷ್ಯಾ ಎದುರು ತಲೆ ಬಾಗುವ ಪ್ರಶ್ನೆಯೇ ಇಲ್ಲ. ರಷ್ಯಾಗೆ ಉಕ್ರೇನ್ ಶರಣಾಗುವುದಕ್ಕೆ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಈ ನಡುವೆ ಪೂರ್ವ ಉಕ್ರೇನ್ನಲ್ಲಿ ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾದಿ ಪಡೆಗಳಿಗೆ ತನ್ನ ಸಶಸ್ತ್ರ ಪಡೆಗಳು ಬೆಂಬಲ ನೀಡುತ್ತಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಯುದ್ಧದ ವಿರುದ್ಧ ಹೊರಗೆ ಬಂದು ಪ್ರತಿಭಟಿಸುವಂತೆ ಉಕ್ರೇನ್ ಅಧ್ಯಕ್ಷರು ರಷ್ಯನ್ನರನ್ನು ಒತ್ತಾಯಿಸಿದ್ದಾರೆ
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು, ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
‘ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ದೇಶವನ್ನು ರಕ್ಷಿಸಲು ಸಿದ್ಧವಾಗಿರುವ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ನಾವು ತೆಗೆದುಹಾಕುತ್ತೇವೆ’ ಎಂದೂ ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ದೇಶದ ಪೂರ್ವದಲ್ಲಿ "ಜನಾಂಗೀಯ ಹತ್ಯೆ" ಯನ್ನು ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ದೇಶದ ಜನರ ಸುರಕ್ಷತೆ ಹಿತದೃಷ್ಟಿಯಿಂದ ಈ ಮಿಲಿಟರಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಯುದ್ಧವನ್ನು ಸಮರ್ಥಿಸಿಕೊಂಡಿದ್ದಾರೆ. ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಈಗ ಉಕ್ರೇನ್ನ ಲುಹಾನ್ಸ್ಕ್ ಪ್ರದೇಶದಲ್ಲಿ ಎರಡು ಪಟ್ಟಣಗಳನ್ನು ನಿಯಂತ್ರಿಸುತ್ತಿದ್ದಾರೆ.