ಸಿದ್ದಾಪುರ, ಫೆ. ೨೨: ನೆರೆ ಸಂತ್ರಸ್ತರಿಗೆ ಗುರುತಿಸಿದ ಜಾಗ ನೆನೆಗುದ್ದಿಗೆ ಬಿದ್ದಿದ್ದು ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ‘‘ಮನೆ ಕಟ್ಟಿಕೊಳ್ಳಿ’’ ಎಂದು ಜಿಲ್ಲಾಡಳಿತ ಆದೇಶಿಸಿದೆ. ಆದರೆ, ಈ ಜಾಗದಲ್ಲಿ ಅಗತ್ಯ ಒಂದು ಸೇತುವೆ ನಿರ್ಮಾಣಗೊಳ್ಳಬೇಕು. ಈ ಸೇತುವೆ ನಿರ್ಮಾಣ ಮಾಡದೆ ಸಂತಸ್ತರು ಮನೆ ಕಟ್ಟಿಕೊಳ್ಳಲು ಅಸಾಧ್ಯ. ಜಿಲ್ಲಾಡಳಿತ ಸೇತುವೆ ನಿರ್ಮಾಣ ಕೆಲಸವನ್ನು ಮಾಡಿ ಅನುಕೂಲ ಕಲ್ಪಿಸಿದರೆ ತಕ್ಷಣ ಮನೆ ನಿರ್ಮಿಸಲು ಪ್ರಾರಂಭಿಸುತ್ತೇವೆ. ಅವಕಾಶ ಮಾಡಿಕೊಡಿ ಎಂದು ಸಂತ್ರಸ್ತರು ‘‘ಶಕ್ತಿ’’ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿಯ ಗ್ರಾಮದ ನದಿ ತೀರದ ನಿವಾಸಿಗಳಿಗೆ ಅರೆಕಾಡು ಗ್ರಾಮದಲ್ಲಿ ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಕಾಮಗಾರಿ ಪ್ರಾರಂಭಿಸದೇ ಕಾಡು ಬೆಳೆದು ನೆನೆಗುದಿಗೆ ಬಿದ್ದಿದೆ. ಕಳೆದ ೨೦೧೮-೧೯ರಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ ನೆಲ್ಯಹುದಿಕೇರಿ ಭಾಗದ ನದಿತೀರದಲ್ಲಿ ವಾಸ ಮಾಡಿಕೊಂಡಿದ್ದ ನೂರಾರು ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿದ್ದವು. ಅಪಾರ ನಷ್ಟ ಸಂಭವಿಸಿತ್ತು. ನದಿ ತೀರದಲ್ಲಿ ವಾಸವಿದ್ದು ಮನೆ ಕಳೆದುಕೊಂಡು ನೂರಾರು ಕುಟುಂಬಗಳು ಸರ್ಕಾರಿ ಶಾಲೆಯಲ್ಲಿ ಸಮುದಾಯ ಭವನಗಳಲ್ಲಿ ಆಶ್ರಯ ಪಡೆದರು.
ನಂತರ ತಮಗೆ ಪುನರ್ವಸತಿ ಕಲ್ಪಿಸಿ ಕೊಡುವಂತೆ ಪರಿಹಾರ ಕೇಂದ್ರದಲ್ಲೇ ಪ್ರತಿಭಟನೆಗಳನ್ನು ನಡೆಸಿ ಪುನರ್ವಸತಿಗಾಗಿ ಪಟ್ಟು ಹಿಡಿದರು. ನೂರಾರು ಕುಟುಂಬಗಳ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರು ಪರಿಹಾರ ಕೇಂದ್ರಕ್ಕೆ ಕಂದಾಯ ಸಚಿವ ಆರ್. ಅಶೋಕ್ ರವರೊಂದಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿಗಳ ಹಾಗೂ ಕಂದಾಯ ಸಚಿವರ
(ಮೊದಲ ಪುಟದಿಂದ) ಆದೇಶದ ಮೇರೆಗೆ ಪುನರ್ವಸತಿಗೆ ಜಾಗ ಗುರುತಿಸಲು ಜಿಲ್ಲಾಡಳಿತ ಮುಂದಾಯಿತು. ನಂತರ ಅರೆಕಾಡು ಗ್ರಾಮದಲ್ಲಿ ಅಭ್ಯತ್‌ಮಂಗಲ ಗ್ರಾಮಕ್ಕೆ ಸೇರಿದ ೮ ಎಕರೆ ಒತ್ತುವರಿ ಜಾಗವನ್ನು ಕಂದಾಯ ಇಲಾಖೆಯು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ಜಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ಕಾಫಿ ಗಿಡಗಳನ್ನು ತೆರವುಗೊಳಿಸಿತು. ಬಳಿಕ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಿವೇಶನಗಳ ಪಟ್ಟಿ ಮಾಡಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಉಪವಿಭಾಗಾಧಿಕಾರಿಗಳು ಫಲಾನುಭವಿಗಳಿಗೆ ನಿವೇಶನಗಳನ್ನು ಟೋಕನ್ ಮೂಲಕ ಹಂಚಿಕೆ ಮಾಡಿದರು. ಆದರೆ ನಿವೇಶನ ಗುರುತಿಸಿದ ಜಾಗದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡಲಿಲ್ಲ. ಕಾಫಿ ಗಿಡಗಳನ್ನು ತೆರವುಗೊಳಿಸಿದ ಬಳಿಕ ವರ್ಷಗಳು ಕಳೆದ ನಂತರ ಅಲ್ಲಿದ್ದ ೩೭೦ ಅಧಿಕ ಮರಗಳನ್ನು ಪಟ್ಟಿ ಮಾಡಿ ತೆರವುಗೊಳಿಸಲಾಯಿತು.
ಆದರೆ ಜಾಗವನ್ನು ನೆಲಸಮ ತಟ್ಟು ಮಾಡುವ ಗೋಜಿಗೆ ಜಿಲ್ಲಾಡಳಿತ ಮುಂದಾಗಲಿಲ್ಲ. ಕಾಫಿ ಗಿಡಗಳನ್ನು ತೆರವುಗೊಳಿಸಿ ಎರಡು ವರ್ಷಗಳು ಕಳೆದರೂ ಕೂಡ ಈ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸಲು ಆಸಕ್ತಿ ವಹಿಸಲಿಲ್ಲ. ಹಿಂದಿನ ಎರಡು ಜಿಲ್ಲಾಧಿಕಾರಿಗಳು ಕೂಡ ಪುನರ್ವಸತಿ ಜಾಗಕ್ಕೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡಿದ್ದರು. ಅಲ್ಲಿ ಸೇತುವೆಯೊಂದು ನಿರ್ಮಾಣ ಮಾಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಸೇತುವೆ ನಿರ್ಮಾಣ ಮಾಡಿದ ಬಳಿಕವಷ್ಟೇ ಈ ಜಾಗದಲ್ಲಿ ಪುನರ್ವಸತಿ ನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯವಾಗಿದೆ. ಆದರೆ ಮೂರು ವರ್ಷಗಳು ಕಳೆದರೂ ಕೂಡ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಮನೆಗಳು ಮರೀಚಿಕೆಯಾಗುತ್ತಿದೆ. ಜಿಲ್ಲಾಡಳಿತದ ವಿಳಂಬದಿAದ ಮನೆ ಕಳೆದುಕೊಂಡಿರುವ ಸಂತ್ರಸ್ತರು ನದಿ ತೀರದಲ್ಲಿ ಈ ಹಿಂದೆ ವಾಸ ಮಾಡಿಕೊಂಡಿರುವ ಜಾಗದಲ್ಲೇ ತಾತ್ಕಾಲಿಕ ಶೆಡ್‌ನಲ್ಲಿ ಸಂಸಾರದೊAದಿಗೆ ಜೀವನ ಸಾಗಿಸುತ್ತಿದ್ದಾರೆ.
ನೋಟೀಸ್‌ನಿಂದ ಗೊಂದಲ: ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಗೊಂದಲಕ್ಕೆ ಸಿಲುಕಿಕೊಂಡರು. ಪುನರ್ವಸತಿಗೆ ಗುರುತಿಸಿದ ಜಾಗದಲ್ಲೇ ಯಾವುದೇ ಕಾಮಗಾರಿ ಮಾಡದೇ ನಿವೇಶನವನ್ನು ಗುರುತಿಸದೇ ೧೦ ದಿನಗಳಲ್ಲಿ ಮನೆ ನಿರ್ಮಾಣ ಮಾಡುವುದು ಹೇಗೆ ಎಂದು ಚಿಂತಾಕ್ರಾAತರಾಗಿದ್ದಾರೆ. ಇದಲ್ಲದೇ ಮುಂದಿನ ಎರಡು-ಮೂರು ತಿಂಗಳು ಕಳೆದರೆ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಕಾವೇರಿ ನದಿಯಲ್ಲಿ ಪ್ರವಾಹ ಬಂದಲ್ಲಿ ಮುಂದೆ ಎಲ್ಲಿ ವಾಸ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಶಾಶ್ವತ ಸೂರಿಗಾಗಿ ಕಳೆದ ಸುಮಾರು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಂತ್ರಸ್ತರಿಗೆ ಮುಂದಿನ ಮಳೆಗಾಲ ಮುಂಚಿತ ಪುನರ್ವಸತಿ ಕಲ್ಪಿಸಿ ಕೊಟ್ಟಲ್ಲಿ ಸಮಸ್ಯೆಗಳು ಬಗೆಹರಿಯುತ್ತದೆಂದು ಸಂತ್ರಸ್ತರ ಅಭಿಪ್ರಾಯವಾಗಿದೆ. ಜಿಲ್ಲಾಡಳಿತ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ಪುನರ್ವಸತಿಗಾಗಿ ಯಾವುದೇ ಕಾಮಗಾರಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಆರ್ ಭರತ್ ತಿಳಿಸಿದ್ದಾರೆ. ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಸೇತುವೆ ನಿರ್ಮಿಸಬೇಕು. ಏಕಾಏಕಿ ನೋಟೀಸ್ ಜಾರಿ ಮಾಡಿರುವುದು ನೋವಿನ ವಿಚಾರ ಎಂದರು.
- ವರದಿ: ವಾಸು ಎ.ಎನ್