ಮಡಿಕೇರಿ, ಫೆ. ೨೨: ಸಹಕಾರ ಸಂಘಗಳನ್ನು ಉಳಿಸಿಕೊಳ್ಳುವುದು ಆಡಳಿತ ಮಂಡಳಿ ಸದಸ್ಯರ ಮತ್ತು ಸಿಬ್ಬಂದಿಗಳ ಜವಾಬ್ದಾರಿಯೇ ಹೊರತು ನೆರವು ನೀಡುವ ಇತರ ಸಂಘ-ಸAಸ್ಥೆಗಳದ್ದಲ್ಲ. ಜವಾಬ್ದಾರಿಯುತ ನಡೆಯೇ ಸಂಘವನ್ನು ಮುನ್ನಡೆಸಬಲ್ಲದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೋಲತಂಡ ಸುಬ್ರಮಣಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಸಹಕಾರ ದವಸ ಭಂಡಾರ, ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ ಮತ್ತು ಇತರೆ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಲೆಕ್ಕಪರಿಶೋಧನೆ, ಲೆಕ್ಕಪತ್ರ ನಿರ್ವಹಣೆ ಹಾಗೂ ಇತ್ತೀಚಿನ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಕುರಿತು ಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ ದಲ್ಲಿ ಮಾತನಾಡಿದ ಅವರು, ಕನಿಷ್ಟ ಮಟ್ಟದ ವ್ಯವಹಾರಗಳನ್ನು ನಡೆಸುವ ಸಹಕಾರ ಸಂಘಗಳನ್ನು ಒಂದೆಡೆ ಸೇರಿಸಿ ತರಬೇತಿ ನೀಡುವ ಯೂನಿಯನ್ ಕಾರ್ಯ ಶ್ಲಾಘನೀಯ. ಲೆಕ್ಕಪತ್ರ ನಿರ್ವಹಣೆಯ ಅರಿವಿನ ಕೊರತೆ, ಉತ್ಸಾಹಭರಿತ ಯುವ ಜನತೆಯ ಕೊರತೆ, ಅಸಮರ್ಪಕ ಮರಣನಿಧಿಯ ನಿರ್ವಹಣೆ ಇತ್ಯಾದಿ ಕಾರಣಗಳಿಂದ ಹೆಚ್ಚಿನ ದವಸ ಭಂಡಾರಗಳ ಸ್ಥಿತಿ ಶೋಚನೀಯ ವಾಗಿದೆ. ಆದುದರಿಂದ ಅಂತಹ ಸಂಘಗಳನ್ನು ಉಳಿಸಿಕೊಳ್ಳಲು ಯುವಜನತೆಯ ಸದಸ್ಯತ್ವ ಮಾಡಿಕೊಳ್ಳುವುದು, ಸಮರ್ಪಕ ಲೆಕ್ಕಪತ್ರ ನಿರ್ವಹಣೆ, ಹೊಸಬರನ್ನು ಆಕರ್ಷಿಸುವಂತೆ ಶಿಥಿಲಾವಸ್ಥೆಯ ಕಟ್ಟಡಗಳನ್ನು ನಿರ್ವಹಣೆ ಮಾಡುವುದು, ಜಾಮೀನು ಸಾಲ ನೀಡುವುದು ಅಂತೆಯೇ ಮರಣನಿಧಿಗೆ ಬಡ್ಡಿ ಸೇರಿಸಿ ವೃದ್ಧಿ ಮಾಡಿ ವಿತರಿಸುವುದು ಇತ್ಯಾದಿ ಕಾರ್ಯಗಳಿಂದ ಸಂಘಗಳನ್ನು ಉಳಿಸಿ ಬೆಳೆಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು, ಕಾರ್ಯದರ್ಶಿಗಳು ಸಹಕಾರ ಸಂಘಗಳ ಬೆನ್ನಲುಬಾಗಿದ್ದಾರೆ. ಅವರ ಸಮರ್ಪಕ ಕಾರ್ಯವೈಖರಿಯಿಂದ ಸಂಘವು ಬೆಳೆಯುತ್ತದೆ. ಸಹಕಾರ ಕ್ಷೇತ್ರವನ್ನು ಬಲಿಷ್ಟಗೊಳಿಸಿ ಸಾಮಾಜಿಕ ನ್ಯಾಯ ನೀಡಲು ಕೇಂದ್ರದಿAದ ಇಂದು ಸಹಕಾರ ಸಚಿವಾಲಯ ಆರಂಭವಾಗಿದೆ. ಇತ್ತೀಚಿನ ಕೇಂದ್ರ ಆಯವ್ಯಯದಲ್ಲಿ ಸಹಕಾರ ಕ್ಷೇತ್ರದ ತೆರಿಗೆಯನ್ನು ಶೇ. ೧೮ ರಿಂದ ಶೇ. ೧೫ಕ್ಕೆ ಇಳಿಕೆ ಮಾಡಲಾಗಿದೆ. ಸಹಕಾರ ಕಾಯ್ದೆ ಕಾನೂನಿನ ಬದಲಾವಣೆಯು ಸೇರಿದಂತೆ ಇತ್ತೀಚಿನ ವಿದ್ಯಮಾನಗಳ ಕುರಿತಾಗಿ ನಡೆಸುವ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಉಪಯುಕ್ತವಾದ ಮಾಹಿತಿಯನ್ನು ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಸಾಮಾನ್ಯ ಸದಸ್ಯರಿಗೆ ಸಿಬ್ಬಂದಿಗಳು ನೀಡಬೇಕು. ಸಹಕಾರ ಸಂಘಗಳು ತಮ್ಮ ಕ್ರಿಯಾತ್ಮಕ ಯೋಜನೆಗಳೊಂದಿಗೆ ಬಂಡವಾಳ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕೆAದು ಹೇಳಿದರು.

ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಅವರು ಇತ್ತೀಚಿನ ಕಾಯ್ದೆ ತಿದ್ದುಪಡಿ ಕುರಿತು ಹಾಗೂ ಸಹಕಾರ ಸಂಘಗಳ ಹಿರಿಯ ನಿವೃತ್ತ ಲೆಕ್ಕಪರಿಶೋಧಕ ಡಿ.ಎನ್. ಚಂದ್ರಶೇಖರ್ ಅವರು ಲೆಕ್ಕಪತ್ರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಎನ್.ಎ. ರವಿ ಬಸಪ್ಪ, ಪ್ರೇಮ ಸೋಮಯ್ಯ, ಪಿ.ಬಿ. ಯತೀಶ್ ಅವರು ಉಪಸ್ಥಿತರಿದ್ದರು.

ಯೂನಿಯನ್‌ನ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮವನ್ನು ಸಿಬ್ಬಂದಿಗಳಾದ ಬಿ.ಸಿ. ಅರುಣ್ ಕುಮಾರ್, ಸುರೇಶ್ ನಿರ್ವಹಿಸಿದರು.