ಶನಿವಾರಸಂತೆ, ಫೆ. ೨೨: ಗಡಿಭಾಗದ ಪುಟ್ಟ ಪಟ್ಟಣ ಶನಿವಾರಸಂತೆ ಸಮಸ್ಯೆಗಳ ಆಗರವಾಗಿದೆ. ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವಾಣಿಜ್ಯ ನಗರಿಯಾಗಿ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ. ಆದರೆ, ಸಮರ್ಪಕ ರಸ್ತೆ ಹಾಗೂ ಮುಖ್ಯವಾಗಿ ಬಸ್ ನಿಲ್ದಾಣ ಇಲ್ಲದೇ ಸಮಸ್ಯೆ ಉಂಟಾಗುತ್ತಿದೆ.

ಸಮುದಾಯ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಪೊಲೀಸ್ ಠಾಣೆ, ಕಂದಾಯ ಇಲಾಖೆ, ಬ್ಯಾಂಕ್ ಶಾಖೆಗಳು ಪ್ರಥಮ ದರ್ಜೆ ಕಾಲೇಜು, ೮ ವಿದ್ಯಾಸಂಸ್ಥೆಗಳು, ನಿರೀಕ್ಷಣಾ ಮಂದಿರ, ಚಿತ್ರಮಂದಿರ, ದೂರವಾಣಿ ವಿನಿಮಯ ಕೇಂದ್ರ ಎಲ್ಲವೂ ಇವೆ. ಆದರೆ, ವ್ಯವಸ್ಥಿತ ಸರ್ಕಾರಿ, ಖಾಸಗಿ ಬಸ್ ನಿಲ್ದಾಣವೇ ಇಲ್ಲ!!

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವೇ ತಾತ್ಕಾಲಿಕ ಬಸ್ ನಿಲ್ದಾಣವಾಗಿದೆ. ಇಲ್ಲಿರುವ ಏಕೈಕ ಮುಖ್ಯ ರಸ್ತೆಯೆಂದರೆ ಫೀಲ್ಡ್ ಮಾರ್ಷಲ್ ರಸ್ತೆ. ಇಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ಮುಖ್ಯ ರಸ್ತೆ ಬಹಳ ಇಕ್ಕಟ್ಟಿನಿಂದ ಕೂಡಿದ್ದು, ವಾಹನ ಸಂಚಾರ ತ್ರಾಸದಾಯಕವಾಗಿದೆ.

ಮತ್ತೊಂದು ಬೈಪಾಸ್ ರಸ್ತೆಯಿದ್ದರೂ ಶನಿವಾರ ವಾರದ ಸಂತೆಯ ದಿನ ಮಾತ್ರ ಏಕಮುಖ ಸಂಚಾರ ವ್ಯವಸ್ಥೆಯಿದೆ. ಮುಖ್ಯರಸ್ತೆ, ಬೈಪಾಸ್ ರಸ್ತೆಗಳೆರಡರಲ್ಲೂ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲೂ ತೀರಾ ಗಿಜಿಗುಡುವ ಜನಸಂದಣಿ ಇರುತ್ತದೆ. ೪ ಕಡೆಯ ರಸ್ತೆಯಿಂದ ಬರುವ ವಾಹನಗಳನ್ನು ತಪ್ಪಿಸಿ ಪಾದಾಚಾರಿಗಳು ತಿರುಗಾಡುವುದು ತ್ರಾಸದಾಯಕವಾಗಿದೆ.

ಕೊಡಗು - ಹಾಸನ ಜಿಲ್ಲೆಗಳ ಗಡಿ ಭಾಗದಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಇದೆ. ಪ್ರತಿದಿನ ಜಿಲ್ಲೆಯಿಂದ ಹಾಗೂ ಬೆಂಗಳೂರು, ಮೈಸೂರು, ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ ಮೊದಲಾದ ನಗರ ಪ್ರದೇಶಗಳಿಂದ ಸರ್ಕಾರಿ ಬಸ್‌ಗಳು ಬರುತ್ತಿರುತ್ತವೆ. ನಿಮಿಷಕ್ಕೊಮ್ಮೆ ಖಾಸಗಿ ಬಸ್‌ಗಳು ಬರುತ್ತವೆ. ವಿವಿಧೆಡೆಯಿಂದ ಬರುವ ಬಸ್ಸುಗಳು ಕೊಡ್ಲಿಪೇಟೆ, ಸೋಮವಾರ ಪೇಟೆ, ಮಡಿಕೇರಿಗೆ ತೆರಳುವ ಸರ್ಕಾರಿ ಬಸ್‌ಗಳು ಶನಿವಾರಸಂತೆ ಊರೊಳಗೆ ಬಂದು ಕಿತ್ತೂರು ರಾಣಿ ಚೆನ್ನಮ್ಮ ವೃತ್ತವನ್ನು ಪ್ರದಕ್ಷಿಣೆ ಹಾಕಿಯೇ ಹೋಗಬೇಕು.

ಪಟ್ಟಣದಲ್ಲೊಂದು ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಾಣವಾದರೆ ಮಾತ್ರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಬಹುದು. ಬಸ್ ನಿಲ್ದಾಣ ನಿರ್ಮಿಸಲು ಜಾಗ ಕಾಯ್ದಿರಿ ಸುವ ವಿಚಾರ ವಿವಾದಗ್ರಸ್ತವಾಗಿದ್ದು, ಬೆಳವಣಿಗೆ ಕುಂಠಿತವಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರಸಂತೆ ಪಟ್ಟಣವನ್ನು ಹೋಬಳಿಯ ೯ ಗ್ರಾಮ ಪಂಚಾಯಿ ತಿಗಳ ಜನ ಎಲ್ಲಾ ಕೆಲಸಗಳಿಗೆ ಅವಲಂಭಿತ ಪೇಟೆಯಾಗಿದೆ. ಅಭಿವೃದ್ಧಿ ಹೊಂದಿ ಬೆಳೆಯುತ್ತಿರುವ ಈ ಪಟ್ಟಣದಲ್ಲಿ ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.

ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಯಂತೂ ಇಲ್ಲವೇ ಇಲ್ಲ. ಅದಕ್ಕೂ ಮೊದಲು ೪೫ ವರ್ಷಗಳಿಂದ ಯಥಾಸ್ಥಿತಿ ಇರುವ ಇಕ್ಕಟ್ಟಿನ ಕಿರಿದಾದ ಮುಖ್ಯರಸ್ತೆ ಅಗಲೀಕರಣವಾಗಿ ಸುಗಮ ವಾಹನ ಸಂಚಾರಕ್ಕೆ ಯೋಗ್ಯವಾಗಬೇಕು ಎಂದು ಶನಿವಾರಸಂತೆಯ ರವಿ ಹೇಳುತ್ತಾರೆ.

ನಾಲ್ಕು ರಸ್ತೆಗಳ ಸಂಗಮ ಸ್ಥಳ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವಾಗಿದ್ದು, ಜಿಲ್ಲೆಯ ವಿವಿಧೆಡೆಯಿಂದ ಸರ್ಕಾರಿ, ಖಾಸಗಿ ವಾಹನಗಳು ಒಂದೇ ಬಾರಿಗೆ ಬಂದಾಗ ಅಪಘಾತವಾಗುವ ಸಾಧ್ಯತೆ ಹೆಚ್ಚು. ಜನ ಬಸ್ಸಿಗಾಗಿ ಕಾಯಲೂ ಸ್ಥಳವಿಲ್ಲ. ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವತ್ತ ಹಾಗೂ ಬಸ್ ನಿಲ್ದಾಣ ನಿರ್ಮಿಸುವತ್ತ ಜನಪ್ರತಿನಿಧಿಗಳು ಶೀಘ್ರÀ್ರ ಗಮನಹರಿಸಬೇಕು ಎಂದು ಶನಿವಾರಸಂತೆ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ ರಮೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.