ಮಡಿಕೇರಿ, ಫೆ. ೨೨ : ಮುಕ್ಕೋಡ್ಲುವಿನ ಆವಂಡಿ ಗ್ರಾಮದ ಕೋಟೆ ಅಬ್ಬಿ ಜಲಪಾತ ವ್ಯಾಪ್ತಿಯಲ್ಲಿ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿವೆೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕ್ಕಂದೂರು ಗ್ರಾ.ಪಂ ಅಧ್ಯಕ್ಷ ಶ್ಯಾಂ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಮಕ್ಕಂದೂರಿನ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆದ ೨೦೨೧-೨೨ನೇ ಸಾಲಿನ ಗ್ರಾಮಸಭೆಯಲ್ಲಿ ಕೋಟೆ ಅಬ್ಬಿ ಜಲಪಾತದ ವಿಷಯ ಪ್ರಸ್ತಾಪಿಸಿದರು.

ಗ್ರಾಮಸ್ಥರಾದ ಹಂಚೆಟ್ಟಿರ ಮನು ಮುದ್ದಪ್ಪ ಮಾತನಾಡಿ ಗ್ರಾ.ಪಂ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಲಪಾತದ ಬಳಿ ಡ್ರೋನ್ ಚಿತ್ರೀಕರಣ ಹಾಗೂ ಫೋಟೋ ಶೂಟ್ ನೆಪದಲ್ಲಿ ಪ್ರವಾಸಿಗರನ್ನು ಸುಲಿಗೆ ಮಾಡುತ್ತಿದ್ದು, ಇದಕ್ಕೆ ಯಾವುದೇ ರಶೀದಿಯನ್ನು ನೀಡದೆ ವಂಚನೆ ಮಾಡಲಾಗುತ್ತಿದೆ. ಪಂಚಾಯಿತಿ ಇದನ್ನು ಕಂಡು ಕಾಣದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ತಕ್ಷಣ ಹರಾಜು ಪ್ರಕ್ರಿಯೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಕ್ಕಂದೂರು ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ವಿಕಾಸ್ ಅಚ್ಚಯ್ಯ ಮಾತನಾಡಿ, ೨೦೧೮ರಲ್ಲಿ ಮಕ್ಕಂದೂರು ಹೋಂ ಸ್ಟೇ ಅಸೋಷಿಯೇಷನ್‌ನಿಂದ ಕೋಟೆ ಅಬ್ಬಿಯ ಬಗ್ಗೆ ಪ್ರಸ್ತಾಪಿಸಲಾಯಿತು. ಆಗ ಒಂದು ತಿಂಗಳ ನಂತರ ಹರಾಜು ಪ್ರಕ್ರಿಯೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಂದಿನ ವರೆಗೂ ಕಾರ್ಯಗತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥ ಕೊಕ್ಕಲೆರ ನಾಣಯ್ಯ ಮಾತನಾಡಿ, ಕೋಟೆ ಅಬ್ಬಿ ಜಲಪಾತವನ್ನು ಊರಿನವರ ಸುಪರ್ದಿಗೆ ನೀಡಬೇಕು. ಬಂದ ಹಣವನ್ನು ಜಲಪಾತದ ಸ್ವಚ್ಛತೆ ಹಾಗೂ ಗ್ರಾಮದ ಅಭಿವೃದ್ಧಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಪಂಚಾಯಿತಿ ಪಿಡಿಒ ಉತ್ತರಿಸಿ ಜಲಪಾತದ ಸುತ್ತಮುತ್ತ ಖಾಸಗಿ ಜಾಗವಿದ್ದು, ಹರಾಜು ಪ್ರಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ ಎಂದರು.

ಈ ಸಂದರ್ಭ ಗ್ರಾಮಸ್ಥರು ಕೋಟೆ ಅಬ್ಬಿ ಜಲಪಾತದಲ್ಲಿ ಮಾ.೩೧ ರಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ, ವಾಹನ ನಿಲುಗಡೆ ಸುಂಕವನ್ನು ರದ್ದುಗೊಳಿಸಲು ತೀರ್ಮಾನ ಕೈಗೊಂಡರು.

ಮಕ್ಕAದೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಬೇಕೆಂದು ಪೊಲೀಸ್ ಇಲಾಖೆ ಹಾಗೂ ಪಂಚಾಯಿತಿಯ ಆಡಳಿತ ಮಂಡಳಿಯನ್ನು ಗ್ರಾಮಸ್ಥರು ಒತ್ತಾಯಿಸಿದರು. ಮರಳನ್ನು ಸ್ಥಳೀಯವಾಗಿ ಗ್ರಾಮಸ್ಥರು ಉಪಯೋಗಿಸಲು ನಿರ್ಣಯ ಕೈಗೊಳ್ಳಲಾಯಿತು.

ಎನ್‌ಒಸಿ ನೆಪದಲ್ಲಿ ಗ್ರಾಮಸ್ಥರನ್ನು ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಿ ಸೂಕ್ತ ಸಮಯದಲ್ಲಿ ಎನ್‌ಒಸಿ ನೀಡಬೇಕೆಂದು ಒತ್ತಾಯಿಸಿದರು.

ಗ್ರಾಮಸ್ಥ ಮಧು ತಿಮ್ಮಯ್ಯ ಮಾತನಾಡಿ, ಕೋಟೆ ಬೆಟ್ಟಕ್ಕೆ ಪ್ರವಾಸಿಗರು ಎಗ್ಗಿಲ್ಲದೆ ಆಗಮಿಸುತ್ತಿದ್ದು, ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ಕಾಡ್ಗಿಚ್ಚು ಹೆಚ್ಚಾಗುತ್ತಿದೆ. ಆದರೆ ಅರಣ್ಯ ಇಲಾಖೆ ಕೇವಲ ಬಂದು ಹೋಗುವ ಮೂಲಕ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಕೋಟೆ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಬೀಟ್ ಪೊಲೀಸರನ್ನು ನಿಯೋಜಿಸಬೇಕು, ಪ್ರವಾಸಿಗರ ಆಗಮನಕ್ಕೆ ಸಮಯ ನಿಗದಿಪಡಿಸಬೇಕು, ಇತರ ಸಮಯದಲ್ಲಿ ಗೇಟ್‌ಗೆ ಬೀಗ ಅಳವಡಿಸುವ ಕ್ರಮ ಕೈಗೊಳ್ಳಬೇಕು ಎಂದರು.

ಅಬಕಾರಿ ಇಲಾಖೆಯ ಸೌಮ್ಯಶ್ರೀ ಮಾತನಾಡಿ, ಅಕ್ರಮ ಗಾಂಜಾ, ಮದ್ಯ ಮಾರಾಟದ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿದರು.

ಗ್ರಾ.ಪಂ ಉಪಾಧ್ಯಕ್ಷೆ ಕವಿತಾ, ಪಿಡಿಓ ಪ್ರಸನ್ನ ವಿಎಸ್‌ಎಸ್‌ಎನ್ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ, ನೋಡಲ್ ಅಧಿಕಾರಿ, ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.