ಸೋಮವಾರಪೇಟೆ, ಫೆ. ೨೨: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯೇ ಅಸಹಕಾರ ನೀಡುತ್ತಿದ್ದು, ಇವರಿಂದಾಗಿ ಪಂಚಾಯಿತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ, ಗ್ರಾ.ಪಂ. ಸದಸ್ಯರುಗಳು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಘಟನೆ ಸಮೀಪದ ಐಗೂರಿನಲ್ಲಿ ನಡೆದಿದೆ.

ಐಗೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಉಪಾಧ್ಯಕ್ಷೆ ಜಾನಕಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಭೆಯ ಆರಂಭದಲ್ಲಿಯೇ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ದೂರುಗಳ ಸುರಿಮಳೆಗೈದ ಸದಸ್ಯರುಗಳು, ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾದವ್ ಅವರು ಸದಸ್ಯರುಗಳ ಅಹವಾಲು ಆಲಿಸುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ನಿವಾರಣೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು, ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರುಗಳು ದೂರಿದರು.

ಕಳೆದ ಜನವರಿ ೨೩ರಂದು ನಡೆದ ಸಾಮಾನ್ಯ ಸಭೆಯಲ್ಲಿ ವಸತಿರಹಿತರ ಪಟ್ಟಿಯನ್ನು ಪರಿಶೀಲಿಸಿ, ಅವರುಗಳಿಗೆ ಮನೆ ನೀಡುವ ಉದ್ದೇಶದಿಂದ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಇದನ್ನು ಈ ತಿಂಗಳ ೧೦ರೊಳಗೆ ಸಂಬAಧಿಸಿದ ಇಲಾಖೆಗೆ ಸಲ್ಲಿಸಬೇಕಿದ್ದರೂ, ಪಿಡಿಓ ಅವರು ಪಟ್ಟಿ ನೀಡದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಇದರಿಂದಾಗಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಗ್ರಾ.ಪಂ. ಸದಸ್ಯ ವಿನೋದ್ ಆರೋಪಿಸಿದರು.

ಇಷ್ಟೇ ಅಲ್ಲದೇ ವಾರ್ಡ್ ವ್ಯಾಪ್ತಿಯಲ್ಲಿರುವ ನೀರಿನ ಸಮಸ್ಯೆ, ಬೀದಿ ದೀಪ, ರಸ್ತೆ, ಮೋರಿ, ಚರಂಡಿ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ. ಸಮಸ್ಯೆಗಳ ಬಗ್ಗೆ ಖುದ್ದು ಸದಸ್ಯರೇ ಗಮನಕ್ಕೆ ತಂದರೂ ಸ್ಪಂದನ ನೀಡುತ್ತಿಲ್ಲ. ಗ್ರಾ.ಪಂ. ಕಚೇರಿಗೂ ಸಮರ್ಪಕವಾಗಿ ಆಗಮಿಸುತ್ತಿಲ್ಲ. ಇಂತಹ ಅಭಿವೃದ್ಧಿ ಅಧಿಕಾರಿ ನಮ್ಮ ಗ್ರಾ.ಪಂ.ಗೆ ಅಗತ್ಯವಿಲ್ಲ ಎಂದು ಬಹುತೇಕ ಸದಸ್ಯರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದರು.

ಪಿಡಿಓ ಅವರ ಅಸಮರ್ಪಕ ಆಡಳಿತ ಬಗ್ಗೆ ಈಗಾಗಲೇ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಪಿಡಿಓ ಯಾದವ್ ಅವರನ್ನು ಬದಲಾಯಿಸಿ, ನೂತನ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಲಾಗುವುದು. ಗ್ರಾ.ಪಂ. ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರು ಇತ್ತ ಗಮನಹರಿಸಬೇಕು ಎಂದು ಸದಸ್ಯರುಗಳು ಪತ್ರಿಕೆ ಮೂಲಕ ಮನವಿ ಮಾಡಿದರು.