ಮಡಿಕೇರಿ, ಫೆ. ೨೨ : ದಕ್ಷಿಣ ಕೊಡಗಿನ ಶ್ರೀಮಂಗಲ ಸನಿಹದಲ್ಲಿ ಬರುವ ಧಾರ್ಮಿಕ ಸ್ಥಳವೂ, ಪ್ರವಾಸಿಗರ ಆಕರ್ಷಕ ತಾಣವೂ ಆಗಿರುವ ಶ್ರೀ ಇರ್ಪು ರಾಮೇಶ್ವರ ಕ್ಷೇತ್ರ ಜೀರ್ಣೋದ್ಧಾರದೊಂದಿಗೆ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಶಿವರಾತ್ರಿ ಉತ್ಸವ ಆಚರಣೆಯು ಪ್ರಮುಖವಾಗಿದ್ದು, ಸದ್ಯದಲ್ಲಿ ಬರಲಿರುವ ಶಿವರಾತ್ರಿಯ ಕಾರ್ಯಗಳಿಗಾಗಿ ಸಜ್ಜಾಗುತ್ತಿದೆ.

ಇರ್ಪು ರಾಮೇಶ್ವರ ಕ್ಷೇತ್ರವು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ದೇವಸ್ಥಾನದ ಸನಿಹದಲ್ಲಿ ಬರುವ ಇರ್ಪು ಜಲಪಾತಕ್ಕೂ ವಿಶೇಷ ಮಹತ್ವವಿದ್ದು, ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಭಕ್ತಾದಿಗಳಿಂದ ಪುಣ್ಯ ಸ್ನಾನವೂ ಜರುಗುವುದು ವಿಶೇಷವಾಗಿದೆ.

ಕ್ಷೇತ್ರದ ಶಾಸಕರು ಗೌರವ ಅಧ್ಯಕ್ಷರು ಹಾಗೂ ಸ್ಥಳೀಯ ಪ್ರಮುಖರಾಗಿರುವ ಮದ್ರೀರ ಪಿ. ವಿಷ್ಣು ಅವರ ಅಧ್ಯಕ್ಷತೆಯ ಇರ್ಪು ರಾಮೇಶ್ವರ ಅಭಿವೃದ್ಧಿ ಸಮಿತಿಯ ಮೂಲಕ ಈಗಾಗಲೇ ದೇವಸ್ಥಾನದಲ್ಲಿ ಜೀರ್ಣೋದ್ಧಾರದೊಂದಿಗೆ ಹಲವು ಅಭಿವೃದ್ಧಿ ಕೆಲಸಗಳನ್ನೂ ನಿರ್ವಹಿಸಲಾಗಿದೆ. ದೇವಸ್ಥಾನ ಹಾಗೂ ಗರ್ಭಗುಡಿಗೆ ತಾಮ್ರದ ಹೊದಿಕೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ರೂ. ೮೦ ಲಕ್ಷ ವೆಚ್ಚದಲ್ಲಿ ನಮಸ್ಕಾರ ಮಂಟಪವನ್ನು ನಿರ್ಮಿಸಲಾಗಿದ್ದರೆ ರೂ. ೧.೨೦ ಕೋಟಿ ವೆಚ್ಚದಲ್ಲಿ ದೇವಾಲಯದ ಒಳ ಪೌಳಿಯನ್ನು ಸಿದ್ಧಪಡಿಸಲಾಗಿದೆ. ಮುಂದೆ ರೂ. ೨ ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣದ ಯೋಜನೆಯೂ ಇರುವುದಾಗಿ ಮದ್ರೀರ ವಿಷ್ಣು ಅವರು ತಿಳಿಸಿದ್ದಾರೆ.

(ಮೊದಲ ಪುಟದಿಂದ) ಪ್ರಸ್ತುತ ಸುಮಾರು ರೂ. ೨ ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ. ಸರಕಾರದಿಂದ ರೂ. ೨೦ ಲಕ್ಷದಷ್ಟು ಅನುದಾನ ದೊರೆತಿದ್ದರೆ, ಬಾಕಿ ಹಣವನ್ನು ದಾನಿಗಳಿಂದ, ಸಾರ್ವಜನಿಕ ವಂತಿಕೆ ಮೂಲಕ ಸಂಗ್ರಹಿಸಲಾಗಿದೆ. ಸುಮಾರು ರೂ. ೬ ಲಕ್ಷ ವೆಚ್ಚದಲ್ಲಿ ಮೂರು ಎಕರೆಯಷ್ಟು ವಿಶಾಲ ಜಾಗವನ್ನು ವಾಹನ ನಿಲುಗಡೆಗಾಗಿ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಜಲಪಾತಕ್ಕೆ ತೆರಳುವ ಮಾರ್ಗವನ್ನು ಕಾಂಕ್ರೀಟ್ ರಸ್ತೆ ಹಾಗೂ ಮೆಟ್ಟಿಲುಗಳ ಮೂಲಕ ಪ್ರವಾಸೋದ್ಯಮ ಇಲಾಖೆಯಿಂದ ದೊರೆತ ರೂ. ೫೦ ಲಕ್ಷ ಅನುದಾನದಲ್ಲಿ ಸರಿಪಡಿಸಲಾಗಿದೆ.

ಪ್ರಸ್ತುತ ಬಹುತೇಕ ಕಾಮಗಾರಿಗಳು ನಡೆದಿದ್ದು, ಭವಿಷ್ಯದಲ್ಲಿ ಅನ್ನಛತ್ರ ನಿರ್ಮಾಣ ಹಾಗೂ ರಾಜಗೋಪುರ ನಿರ್ಮಾಣದ ಚಿಂತನೆ ಹೊಂದಿರುವುದಾಗಿ ಸಮಿತಿ ಅಧ್ಯಕ್ಷರಾದ ವಿಷ್ಣು ಅವರು ಹೇಳಿದ್ದಾರೆ.

ಜಲಪಾತದಲ್ಲಿ ಭಕ್ತಾದಿಗಳ ಪುಣ್ಯ ಸ್ನಾನಕ್ಕಾಗಿ ಜಾಗವನ್ನು ರೈಲು ಕಂಬಿಯ ಮೂಲಕ ಹಾಗೂ ಮೇಲ್ಭಾಗದಲ್ಲಿ ಬಿದಿರಿನ ತಟ್ಟಿ ಅಳವಡಿಸುವ ಮೂಲಕ ಸುಭದ್ರಗೊಳಿಸಲಾಗಿದೆ. ಈ ಬಾರಿ ಫೆಬ್ರವರಿ ೨೪ ರಂದು ಕೊಡಿಮರ ನಿಲ್ಲಿಸುವ ಮೂಲಕ ದೇವಾಲಯದ ವಾರ್ಷಿಕ ಉತ್ಸವ ಆರಂಭವಾಗಲಿದ್ದು, ಮಾರ್ಚ್ ೧ ರಂದು ಶಿವರಾತ್ರಿ ಹಾಗೂ ಮರುದಿನ ಜಾತ್ರೆ ಜರುಗಲಿದೆ. ಇದಕ್ಕಾಗಿಯೂ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ.