ವೀರಾಜಪೇಟೆ, ಫೆ. ೨೨: ಭಕ್ತಿ ಪ್ರೊಡಕ್ಷನ್ ಮೂಲಕ ಮೈಸೂರಿನ ರಚನಾ ನಿರ್ಮಿಸುತ್ತಿರುವ ಕೊಡವ ಚಲನಚಿತ್ರ ತೇಂಬಾಡ್ ಶೀಘ್ರ ಪ್ರೇಕ್ಷಕರ ಮುಂದೆ ಬರಲಿದೆ ಎಂದು ನಿರ್ದೇಶಕಿ ತಡಿಯಂಗಡ ಗಾನ ಸೋಮಣ್ಣ ಹೇಳಿದರು.
ವೀರಾಜಪೇಟೆ ಪಟ್ಟಣದಲ್ಲಿರುವ ದರ್ಶನ್ ರೆಸಿಡೆನ್ಸಿಯಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಚಿತ್ರದ ಟೀಸರ್ ಹಾಗೂ ಹಾಡು ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ೫ ವರ್ಷದ ಹಿಂದೆ ಕಿರುಚಿತ್ರ ನಿರ್ದೇಶನ ಮಾಡಿದ್ದು, ಇದೀಗ ನನ್ನ ನಿರ್ದೇಶನದ ಮೊದಲ ಕೊಡವ ಚಲನಚಿತ್ರ ಸಿದ್ಧವಾಗಿದೆ ಎಂದರು.
ಕೊಡವಾಮೆ ಬೆಳವಣಿಗೆಗೆ ಪೂರಕವಾಗಿ ಕೊಡವ ಚಲನಚಿತ್ರಗಳು ನಿರ್ಮಾಣ ಆಗುತ್ತಿರುವುದು ಶ್ಲಾಘನೀಯ. ತೇಂಬಾಡ್ ಚಿತ್ರದ ಹಾಡು ಬಹಳ ಅರ್ಥಪೂರ್ಣವಾಗಿದ್ದು, ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬಂದಿರುವ ನಿರೀಕ್ಷೆ ಮೂಡಿಸಿದೆ ಎಂದು ಹಾಡು ಬಿಡುಗಡೆ ಮಾಡಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಹೇಳಿದರು.
ಕೊಡವ ಭಾಷೆಯಲ್ಲಿ ಚಲನಚಿತ್ರ, ಕಿರುಚಿತ್ರ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಆಗುತ್ತಿರುವುದು ಶ್ಲಾಘನೀಯ. ಇದರಿಂದ ಹೊಸ ಹೊಸ ಕಲಾವಿದರಿಗೆ ಅವಕಾಶ ಸಿಗುತ್ತಿದೆ ಎಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು. ತೇಂಬಾಡ್ ಕೊಡವ ಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿರೀಕ್ಷೆ ಹೊಂದಿದೆ. ಕೊಡವ ಸಂಸ್ಕೃತಿಯನ್ನು ಸಣ್ಣ ಪ್ರಾಯದಿಂದಲೇ ಮಕ್ಕಳಿಗೆ ಕಲಿಸಬೇಕೆಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತೀತೀರ ಛಾಯಾ ಧರ್ಮಜ ಹೇಳಿದರು.
ಗಾನ ಅವರೊಂದಿಗಿನ ೫ ವರ್ಷದ ಸ್ನೇಹಕ್ಕೆ ಬೆಲೆಕೊಟ್ಟು ಕೊಡವ ಚಿತ್ರದ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದು, ಇದು ಹೊಸ ಪ್ರಯತ್ನ ಎಂದು ನಿರ್ಮಾಪಕಿ ಮೈಸೂರಿನ ರಚನಾ ಹೇಳಿದರು. ಚಿತ್ರ ತಂಡದ ಮೇಲಿನ ನಂಬಿಕೆಯಿAದ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಕೊಡವ ಚಿತ್ರ ನಿರ್ಮಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಗಾನ ಅವರ ಪರಿಶ್ರಮ ಮತ್ತು ಪ್ರಯತ್ನದಿಂದ ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಂಡೇಪAಡ ವಿನಾಂಕ್ ಕುಟ್ಟಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಂಜನಗೂಡಿನ ಮಿಂಚು ಹೆಲ್ತ್ಕೇರ್ ಮುಖ್ಯಸ್ಥರಾದ ಡಾ.ಸಿ.ಎಸ್. ರವಿ ಪಾಲ್ಗೊಂಡಿದ್ದರು. ಹಿರಿಯ ಕಲಾವಿದ ವಾಂಚಿರ ವಿಠಲ ನಾಣಯ್ಯ ಮಾತನಾಡಿದರು. ಮುಂಡಚಾಡಿರ ರಿನ್ನಿ ಭರತ್, ಮಾತಂಡ ದೇಚಮ್ಮ ನಿರೂಪಿಸಿದರು. ಪೋಡಮಾಡ ಭವಾನಿ ನಾಣಯ್ಯ ಪ್ರಾರ್ಥಿಸಿದರು. ತಡಿಯಂಗಡ ಗಾನ ಸೋಮಣ್ಣ ಸ್ವಾಗತಿಸಿದರು. ಮುಕ್ಕಾಟೀರ ಮೌನಿ ನಾಣಯ್ಯ ವಂದಿಸಿದರು.