ಕುಶಾಲನಗರ, ಫೆ.೨೦: ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಮುಸ್ಲಿಂ ಒಕ್ಕೂಟದ ಕೇಂದ್ರಿಯ ಸಮಿತಿ ಉದ್ಘಾಟನಾ ಸಮಾರಂಭ ಕುಶಾಲನಗರದ ಶಾದಿಮಹಲ್ನಲ್ಲಿ ನಡೆಯಿತು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಮುಫ್ತಿ ಹಾರೂನ್ ಫಜಲ್, ಸಮುದಾಯದ ಜನರು ಅನ್ಯಾಯಕ್ಕೊಳಗಾದ ಸಂದರ್ಭ ಸಮುದಾಯದ ಪರ ನಿಂತು ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಕುಶಾಲನಗರ - ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕೇಂದ್ರೀಯ ಸಮಿತಿಯನ್ನು ರಚಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಸಮುದಾಯದ ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸಗಳು ಒಕ್ಕೂಟದಿಂದ ಆಗಲಿ ಎಂದು ಹೇಳಿದರು.
ಹಿಲಾಲ್ ಮಸೀದಿ ಧರ್ಮ ಗುರುಗಳಾದ ಸೂಫಿ ದಾರಿಮಿ, ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆೆ. ಇದನ್ನು ಪ್ರಶ್ನಿಸಲು ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಮುಸ್ಲಿಂ ಒಕ್ಕೂಟ ಮುಂದಾಗಿರುವುದು ಶ್ಲಾಘನೀಯ ಎಂದರು.
ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಕರೀಂ ಮಾತನಾಡಿ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ೪೮ ಮಹಲ್ಗಳನ್ನು ಸೇರಿಸಿ ಕೇಂದ್ರೀಯ ಸಮಿತಿಯನ್ನು ರಚಿಸಲಾಗಿದೆ. ಸಮುದಾಯದವರಿಗೆ ಅನ್ಯಾಯವಾದಲ್ಲಿ, ದೌರ್ಜನ್ಯವಾದಲ್ಲಿ ಮುಸ್ಲಿಂ ಒಕ್ಕೂಟ ಸಮುದಾಯ ಪರವಾಗಿ ನಿಂತು ಹೋರಾಟ ನಡೆಸಲಿದೆ ಎಂದರು.
ಫಾಳಿಲಾ ಶರೀಅತ್ ಕಾಲೇಜ್ನ ಗುರುಗಳಾದ ಇಬ್ರಾಹಿಂ ಬಾತಿಷಾ ಶಂಶಿ ಮಾತನಾಡಿ, ಸಮುದಾಯದ ಜನರ ಒಳಿತಿಗಾಗಿ ಮುಸ್ಲಿಂ ಒಕ್ಕೂಟ ರಚನೆಯಾಗುತ್ತಿರುವುದು ಸಂತಸದ ಸಂಗತಿ. ಪಕ್ಷಾತೀತವಾಗಿ ಒಕ್ಕೂಟವನ್ನು ಮುನ್ನಡೆಸಿ ಸಮುದಾಯದವರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮುಸ್ಲಿಂ ಸಮುದಾಯದ ಮುಖಂಡ ಸಿ.ಎಂ.ಉಸ್ತಾದ್ ಹಾಗೂ ಹಿರಿಯ ನಿವೃತ್ತ ಶಿಕ್ಷಕ ನಜೀರ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮುಸ್ಲಿಂ ಒಕ್ಕೂಟದ ಪ್ರಮುಖರಾದ ಶರೀಫ್ ಇಬ್ರಾಹಿಂ ಸ್ವಾಗತಿಸಿದರು. ವೇದಿಕೆಯಲ್ಲಿ ಹಿಲಾಲ್ ಮಸೀದಿ ಮಾಜಿ ಅಧ್ಯಕ್ಷ ಸಲೀಂ ಹಾಜಿ, ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಹನೀಫ್, ಪ್ರಮುಖರಾದ ಹಮೀದ್ ಹಾಗೂ ಸಮುದಾಯದ ಮುಖಂಡರು ಇದ್ದರು.