ಮಡಿಕೇರಿ, ಫೆ. ೧೯: ಮಡಿಕೇರಿಯ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಟಿ.ವಿ., ಕ್ಯಾಮರಾಗಳ ಮುಂದೆ ಏರು ಧ್ವನಿಯಲ್ಲಿ ಬೆದರಿಕೆಯನ್ನು ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಇದರಿಂದಾಗಿ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ. ಮಾನಸಿಕವಾಗಿ ತೊಂದರೆಯಾಗುವAತೆ ಚಿತ್ರೀಕರಿಸಿರುವುದು ಸ್ಪಷ್ಟವಾಗಿದ್ದು, ಇದು ಜೆ.ಜೆ ಕಾಯ್ದೆ ಪ್ರಕಾರ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮುಸ್ಲಿಂ ಜಮಾಅತ್ ಒಕ್ಕೂಟ ಆರೋಪಿಸಿದೆ. ಇದರ ಅಧ್ಯಕ್ಷ ಜಿ.ಹೆಚ್ ಹನೀಫ್ ಸದರಿ ಘಟನೆಯನ್ನು ಚಿತ್ರೀಕರಿಸಲು ಅವಕಾಶ ಮಾಡಿಕೊಟ್ಟು ಸಾರ್ವಜನಿಕವಾಗಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ತಂದಿರುವ ವ್ಯಕ್ತಿಯ ವಿರುದ್ಧ ಹಾಗೂ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿರುವ ಟಿ.ವಿ. ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ. ಮಡಿಕೇರಿ ಜಮಾಅತ್ ಒಕ್ಕೂಟದ ಪ್ರತಿನಿಧಿಗಳು ಹಾಗೂ ಪ್ರಮುಖರು ಈ ಬಗ್ಗೆ ಜಿಲ್ಲಾ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಗೆ ಲಿಖಿತ ದೂರು ನೀಡಿದ್ದಾರೆ.