ಪಾಲಿಬೆಟ್ಟ, ಫೆ. ೧೯: ಕುಡಿಯುವ ನೀರು, ರಸ್ತೆ, ಮನೆ, ನಿವೇಶನ, ವಿದ್ಯುತ್, ಹಕ್ಕುಪತ್ರ, ಸಾರಿಗೆ ಸೌಲಭ್ಯ, ಆಧಾರ್ ಕಾರ್ಡ್ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಹಾಡಿ ನಿವಾಸಿಗಳು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು.

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತಾಗಬೇಕೆAದು ಜಿಲ್ಲಾಧಿಕಾರಿ ಡಾ. ಸತೀಶ ಹೇಳಿದರು.

ಚೆನ್ನಯ್ಯನಕೊಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ಬಸವನಹಳ್ಳಿ ಆಶ್ರಮ ಶಾಲಾ ಸಭಾಂಗಣದಲ್ಲಿ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮಾಲ್ದಾರೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಾಡಿ ನಿವಾಸಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಹಲವಾರು ಸಮಸ್ಯೆಗಳನ್ನು ಮುಂದಿಟ್ಟರು. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶಾಶ್ವತ ಯೋಜನೆ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ತೋಡಲಾಗಿದ್ದು ಪೈಪ್ ಲೈನ್ ಅಳವಡಿಸಿಲ್ಲ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕವೂ ನೀಡಿಲ್ಲ. ಉಪಯೋಗವಾಗದಿದ್ದರೂ ಅಧಿಕ ಮೊತ್ತದ ವಿದ್ಯುತ್ ಬಿಲ್ ಬರುತ್ತಿದೆ. ಗಂಗಾಕಲ್ಯಾಣ ಯೋಜನೆ ಪ್ರಯೋಜನ ಇಲ್ಲದಂತಾಗಿದೆ. ಕೂಡಲೇ ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದರು.

ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆಗಳನ್ನು ದುರಸ್ತಿಪಡಿಸಿ ಕೊಡಬೇಕೆಂದರು.

ಗ್ರಾಮೀಣ ಭಾಗಗಳಲ್ಲಿ ಸಾರಿಗೆ ಸೇವೆಯ ಬಸ್ ಸೌಲಭ್ಯ ಇಲ್ಲದೆ ಕಿಲೋಮೀಟರ್ ಗಟ್ಟಲೆ ಸಾರ್ವಜನಿಕರು ನಡೆದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗು ತ್ತಿದ್ದು ಮಾಲ್ದಾರೆಯ, ಗುಡ್ಲೂರು, ಚೆನ್ನಂಗಿ ಮಾರ್ಗವಾಗಿ ಪಾಲಿಬೆಟ್ಟಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭಿಸ ಬೇಕೆಂದು ಆಗ್ರಹಿಸಿದರು.

ಬಹುತೇಕ ಹಾಡಿಗಳಲ್ಲಿ ವಾಸ ವಾಗಿರುವ ಹಲವಾರು ಕುಟುಂಬಗಳಿಗೆ ಯಾವುದೇ ದಾಖಲಾತಿ ಇಲ್ಲದೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಹಾಡಿಯಲ್ಲಿ ಆಧಾರ್ ಕಾರ್ಡ್ ಮಾಡಲು ಶಿಬಿರ ಆಯೋಜಿಸಬೇಕು. ಅರಣ್ಯದಲ್ಲಿ (ಮೊದಲ ಪುಟದಿಂದ) ವಾಸಿಸುತ್ತಿರುವ ಆದಿವಾಸಿಗಳು ಹಾಗೂ ಇತರ ಅರಣ್ಯ ಪಾರಂಪರಿಕ ವಾಸಿಗಳಿಗೆ ಹಕ್ಕುಪತ್ರ ಸಿಗದೆ ವಂಚಿತರಾಗಿದ್ದು ಎಲ್ಲರಿಗೂ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದರು. ಮಾಲ್ದಾರೆಯಲ್ಲಿ ಶಿಥಿಲಾವ್ಯವಸ್ಥೆ ಯಲ್ಲಿರುವ ಶಾಲಾ ಕೊಠಡಿಗಳನ್ನು ದುರಸ್ತಿ ಪಡಿಸಬೇಕೆಂದು ಮನವಿ ಮಾಡಿದರು.

ಕಾಡಾನೆ, ಹುಲಿ ಹಾವಳಿಯಿಂದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಕಾರ್ಮಿಕರು, ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಶಾಶ್ವತವಾಗಿ ಕಾಡು ಪ್ರಾಣಿಗಳು ತೋಟ ಹಾಗೂ ಗ್ರಾಮಗಳತ್ತ ಬರದ ರೀತಿ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಹಲವಾರು ಸಮಸ್ಯೆಗಳನ್ನು ಜನರು ಜಿಲ್ಲಾಧಿಕಾರಿಗಳ ಬಳಿ ಮುಂದಿಟ್ಟರು. ಜಿಲ್ಲಾಧಿಕಾರಿ ಸತೀಶ್ ಮಾತನಾಡಿ, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡದೊAದಿಗೆ ಇಲ್ಲಿಗೆ ಆಗಮಿಸಿದ್ದು, ನಿಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಲಿದ್ದಾರೆ. ತಕ್ಷಣವೇ ಆಧಾರ್ ಕಾರ್ಡ್ ಶಿಬಿರವನ್ನು ಹಾಡಿಯಲ್ಲೇ ಮಾಡಲಾಗುವದು. ಮೂಲ ದಾಖಲಾತಿಗಳನ್ನು ಹೊಂದಿಕೊAಡು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಕಂಡು, ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್, ತಾಲೂಕು ವೈದ್ಯಾಧಿಕಾರಿ ಯತಿರಾಜ್,

ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಐಟಿಡಿಪಿ ಅಧಿಕಾರಿ ಶ್ರೀನಿವಾಸ್, ಆಹಾರ ಇಲಾಖೆಯ ಗೌರವ್ ಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಗಟಿ, ಕೃಷಿ ಇಲಾಖೆಯ ಶಬಾನಾ, ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಉಪಸ್ಥಿತರಿದ್ದರು

ವರದಿ: ಪುತ್ತಂ ಪ್ರದೀಪ್