ಗೋಣಿಕೊಪ್ಪಲು, ಫೆ. ೧೯: ಕೆಲ ದಿನಗಳ ಹಿಂದೆ ಹಸು ಹಾಗೂ ಗೂಳಿಯ ಮೇಲೆ ದಾಳಿ ನಡೆಸಿ, ಅದನ್ನು ಕೊಂದು ಹಾಕಿ ಮರೆಯಾಗಿದ್ದ ಹುಲಿಯು ಇದೀಗ ಮತ್ತೆ ಇದೇ ಗ್ರಾಮದಲ್ಲಿ ಮತ್ತೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಬಿ.ಶೆಟ್ಟಿಗೇರಿ ಗ್ರಾಮದ ಪೆಗ್ಗಮೊಟ್ಟೆ ಎಂಬಲ್ಲಿನ ಪಿ. ಯಶೋಧ ಎಂಬವರಿಗೆ ಸೇರಿದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಹಸುವಿನ ಮಾಂಸವನ್ನು ತಿಂದಿರುವ ಹುಲಿಯು ಇದರ ಕಳೇಬರವನ್ನು ಬಿಟ್ಟು ಇಲ್ಲಿಂದ ತೆರಳಿದೆ.

ಮನೆಯ ಮಾಲೀಕರು ಹಸುವನ್ನು ಹುಡುಕಿಕೊಂಡು ಹೋದ ಸಂದರ್ಭ ಹಸುವನ್ನು ಹುಲಿಯು ತಿಂದಿರುವ ವಿಷಯ ತಿಳಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮದ್ರಿರ ಗಿರೀಶ್ ರವರಿಗೆ ಸುದ್ದಿ ತಿಳಿಸಿದರು. ಬಳಿಕ ಅರಣ್ಯ ಇಲಾಖೆಯ ಪೊನ್ನಂಪೇಟೆ ಆರ್.ಎಫ್.ಓ. ರಾಜಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆಯು ಹುಲಿ ಸೆರೆಗೆ ಅಗತ್ಯ ಕ್ರಮಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷö್ಯ ವಹಿಸದಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು.

ಹಾಡಹಗಲೇ ಹುಲಿಯು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದು ಇಲ್ಲಿನ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿದ್ದು ಹುಲಿಯ ಸಂಚಾರದ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

- ಹೆಚ್.ಕೆ. ಜಗದೀಶ್