ಸುಂಟಿಕೊಪ್ಪ, ಫೆ. ೧೯: ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ತಡೆಯಲು ಹಾಗೂ ಗ್ರಾಮಸ್ಥರ ಆರೋಗ್ಯ ದೃಷ್ಟಿಯಿಂದ ಕಾನ್‌ಬೈಲ್ ಬೈಚನಹಳ್ಳಿ ವ್ಯಾಪ್ತಿಯ ಶಾಂತಗಿರಿ ತೋಟದ ಒಳಗೆ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಂದಗೋವೆ ಕಾನ್‌ಬೈಲ್ ಗ್ರಾಮಕ್ಕೆ ಸೇರುವ ಶಾಂತಗಿರಿ ತೋಟದಲ್ಲಿ ಕಲ್ಲು ಗಣಿಗಾರಿಕೆ ಕ್ವಾರಿ ಮತ್ತು ಕ್ರಷರ್ ನಡೆಸಲು ಅನುಮತಿಗೆ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ. ವಾಯು ಮತ್ತು ಶಬ್ದ ಮಾಲಿನ್ಯದ ಜೊತೆಗೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೆಲವು ವರ್ಷಗಳಿಂದ ಭೂಕುಸಿತದಿಂದ ಅತಿವೃಷ್ಟಿಯಿಂದ ನೆಲ, ಜಲ, ಭೂಮಿಗೆ ಧಕ್ಕೆ ಉಂಟಾಗಿದೆ. ಕೃಷಿಕರಿಗೆ ಉತ್ತಮ ಫಸಲು ಸಿಗದಂತಾಗಿದೆ. ಆದ್ದರಿಂದ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.