ನಾಪೋಕ್ಲು, ಫೆ. ೧೮: ಎಲ್ಲಾ ಗ್ರಾಹಕರೂ ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ್ ಹೇಳಿದರು.

ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾಹಕರ ಸಂಘ, ಎನ್.ಎಸ್.ಎಸ್. ಘಟಕ, ರೋಟರಿ ಇಂರ‍್ಯಾಕ್ಟ್ ಕ್ಲಬ್, ಭಾರತ್ ಸ್ಕೌಟ್ ಮತ್ತು ಗೈಡ್ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಹಕರ ಸಂಘ ಉದ್ಘಾಟನೆ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳು ಯಾವುವು? ಕಾನೂನು ಎಂದರೆ ಏನು? ಜನನ ಮತ್ತು ಮರಣ ಪ್ರಮಾಣ ಪತ್ರ ಏಕೆ ಬೇಕು, ಅದನ್ನು ಹೇಗೆ ಮತ್ತು ಎಲ್ಲಿ ಪಡೆದುಕೊಳ್ಳಬೇಕು, ಶಿಕ್ಷಣದ ಹಕ್ಕು, ಹೆಣ್ಣು ಮಕ್ಕಳ ಹಕ್ಕು, ಪೋಕ್ಸೋ ಕಾಯಿದೆ ಸೇರಿದಂತೆ ಗ್ರಾಹಕರ ಹಕ್ಕುಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಯ ಕೆ.ಎ. ಹಾರೀಸ್, ಶಿಕ್ಷಕಿ ಉಷಾರಾಣಿ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಉಪನ್ಯಾಸಕ, ಶಿಕ್ಷಕ ವೃಂದದವರು ಹಾಜರಿದ್ದರು. ಶಿಕ್ಷಕಿಯರಾದ ನಂದಿತ ಸ್ವಾಗತಿಸಿ, ಅಶ್ವಿನಿ ವಂದಿಸಿದರು.