ಕುಶಾಲನಗರ, ಫೆ. ೧೮: ನದಿಗಳ ಸಂರಕ್ಷಣೆಗೆ ಕಾವೇರಿ ನೀರಾವರಿ ನಿಗಮ ಮೂಲಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ನಿಗಮದ ಅಧಿಕಾರಿ ಕಿರಣ್ ತಿಳಿಸಿದ್ದಾರೆ.

ಅವರು ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ೧೨೮ನೇ ತಿಂಗಳ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನದಿ ಪ್ರವಾಹ ತಡೆಗಟ್ಟುವ ಮತ್ತು ನದಿ ಸಂರಕ್ಷಣೆ ಹಿನ್ನೆಲೆಯಲ್ಲಿ ಈಗಾಗಲೇ ಇಲಾಖೆ ಮೂಲಕ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದ ಅವರು, ಕುಶಾಲನಗರ, ಭಾಗಮಂಡಲ ವ್ಯಾಪ್ತಿಯಲ್ಲಿ ಸೇರಿದಂತೆ ಕೆಲವೆಡೆ ಕಾವೇರಿ ನದಿಯ ಹೂಳೆತ್ತುವ ಕಾರ್ಯ ನಡೆದಿದೆ. ಪ್ರತಿಯೊಬ್ಬರೂ ನದಿಯ ಮಹತ್ವ ತಿಳಿದುಕೊಂಡು ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಚಂದ್ರಮೋಹನ್, ನದಿಯ ಮಹತ್ವದ ಬಗ್ಗೆ ತಿಳಿಸಿದರು. ಮೂಲ ಕಾವೇರಿಯಿಂದ ನದಿ ಹರಿಯುವ ಉದ್ದಗಲಕ್ಕೂ ಸ್ವಚ್ಛತೆ ಕಾಪಾಡಿ ನದಿಯ ಪಾವಿತ್ರ‍್ಯತೆಯನ್ನು ಉಳಿಸಬೇಕಾಗಿದೆ ಎಂದರು. ಅರ್ಚಕ ಕೃಷ್ಣಮೂರ್ತಿ ಭಟ್ ಅವರಿಂದ ಅರ್ಚನೆ, ಅಷ್ಟೋತ್ತರ ಪೂಜಾ ಕಾರ್ಯಕ್ರಮದ ನಂತರ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಕುಶಾಲನಗರ ಪ್ರವಾಹ ಸಂತ್ರಸ್ತ ವೇದಿಕೆಯ ಪ್ರಮುಖರಾದ ಕೊಡಗನ ಹರ್ಷ, ವಿನಯ್ ಕಾರ್ಯಪ್ಪ, ಕಾವೇರಿ ಮಹಾ ಆರತಿ ಬಳಗದ ಡಿ.ಆರ್. ಸೋಮಶೇಖರ್ ಕೆ.ಆರ್. ಶಿವಾನಂದನ್, ಚೈತನ್ಯ, ಕುಶಾಲನಗರ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ಪದ್ಮ ಪುರುಷೋತ್ತಮ್ ಮತ್ತಿತರರು ಇದ್ದರು.