ಮಡಿಕೇರಿ, ಫೆ. ೧೮: ರಾಜ್ಯದಲ್ಲಿ ಕನ್ನಡದ ಸೋದರ ಭಾಷೆಯಾಗಿ ಪರಿಗಣಿತವಾಗಿರುವ, ಪ್ರಾದೇಶಿಕ ಭಾಷೆಯಾದ ಕೊಡವ ಭಾಷೆಗೆ ಪ್ರತ್ಯೇಕವಾದ ಲಿಪಿ ಇಲ್ಲ. ಕನ್ನಡ ಲಿಪಿಯ ಮೂಲಕವೇ ಈತನಕವೂ ಕೊಡವಭಾಷೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ. ಕೊಡವ ಭಾಷೆಗೆ ಪ್ರತ್ಯೇಕವಾದ ಲಿಪಿಯನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಈ ಹಿಂದಿನಿAದಲೂ ಹಲವು ಮಂದಿ ತಮ್ಮದೇ ಆದ ಪ್ರಯತ್ನ ನಡೆಸಿದ್ದರಾದರೂ ಈ ತನಕ ಯಾವುದೇ ತೀರ್ಮಾನಗಳು ಈ ನಿಟ್ಟಿನಲ್ಲಿ ಆಗಿಲ್ಲ.

ಕೊಡವ ಭಾಷೆಯ ರೀತಿಯಲ್ಲಿಯೇ ಪ್ರಾದೇಶಿಕ ಭಾಷೆಗಳಾಗಿರುವ ಕೊಂಕಣಿ, ತುಳು ಭಾಷೆಗಳಿಗೂ ಪ್ರತ್ಯೇಕ ಲಿಪಿಯನ್ನು ಕಂಡು ಹಿಡಿಯಲಾಗಿದ್ದು, ಇದರ ಬಳಕೆಯೂ ಆಗುತ್ತಿದೆ. ಇದರಂತೆ ಕೊಡವ ಭಾಷೆಗೆ ಲಿಪಿಯನ್ನು ತಯಾರಿಸುವ ನಿಟ್ಟಿನಲ್ಲಿ ಈ ಹಿಂದೆ ಹಲವು ತಜ್ಞರ ಮೂಲಕ ರಚನೆಯಾಗಿರುವ ಲಿಪಿಯನ್ನು ಕ್ರೋಢೀಕರಿಸಿ ಇದರ ಅವಲೋಕನದೊಂದಿಗೆ ಪ್ರತ್ಯೇಕ ಲಿಪಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮೂಲಕ ಪ್ರಯತ್ನವೊಂದನ್ನು ಮಾಡಲಾಗುತ್ತಿದೆ.

ಈ ಹಿಂದೆ ಕೊರವಂಡ ಅಪ್ಪಯ್ಯ, ಪೊಂಜಾAಡ ಅಪ್ಪಯ್ಯ, ಐ.ಮಾ. ಮುತ್ತಣ್ಣ, ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಇತ್ತೀಚೆಗೆ ಮೂಕೋಂಡ ನಿತಿನ್ ಕುಶಾಲಪ್ಪ ಅವರಂತವರು ತಮ್ಮದೇ ಶೈಲಿಯಲ್ಲಿ ಲಿಪಿಯನ್ನು ರಚಿಸಿದ್ದಾರೆ. ಜರ್ಮನಿಯ ಕಾಕ್ಸ್ ಲಿಪಿಯೂ ಒಂದೆಡೆ ರಚನೆಯಾಗಿದೆ. ಕೊಡವ ಭಾಷೆಗೆ ಪ್ರತ್ಯೇಕ ಲಿಪಿಯ ರಚನೆ ಕುರಿತಾಗಿನ ಈ ಪ್ರಯತ್ನಕ್ಕೆ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆಯೂ ಸಹಕಾರ ನೀಡಲಿದೆ. ಆದರೆ ಇದಕ್ಕೆ ಒಂದೇ ಪ್ರಾಕಾರದ ಲಿಪಿಯನ್ನು ಇದಕ್ಕೆ ಅಂತಿಮಗೊಳಿಸಿ ಭಾಷಾ ಸಂಸ್ಥೆ ಹಾಗೂ ಕೇಂದ್ರ

(ಮೊದಲ ಪುಟದಿಂದ) ಸರಕಾರಕ್ಕೆ ನೀಡಬೇಕಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ಭಾಷಾ ಸಂಸ್ಥೆಯೊAದಿಗೆ ನಡೆಸಿರುವ ಪ್ರಯತ್ನಕ್ಕೆ ಸಂಸ್ಥೆಯೂ ಸ್ಪಂದಿಸಿದ್ದು, ಒಂದೇ ರೀತಿಯ ಲಿಪಿಯನ್ನು ಅಂತಿಮಪಡಿಸುವ ಸಲಹೆ ನೀಡಿದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಕೊಡವ ಅಕಾಡೆಮಿಯು ಈ ಪ್ರಯೋಗದ ಸಾಹಸಕ್ಕೆ ಮುಂದಾಗಿದೆ. ಈಗಾಗಲೇ ಹಲವರಿಂದ ರಚಿಸಲ್ಪಟ್ಟಿರುವ ಲಿಪಿಗಳು ಹಾಗೂ ಇನ್ನು ಯಾರಾದರೂ ಹೊಸ ಲಿಪಿಯನ್ನು ತಯಾರಿಸಿದ್ದಲ್ಲಿ ಇದನ್ನು ಅಕಾಡೆಮಿಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಇದರೊಂದಿಗೆ ಅಂತರರಾಷ್ಟಿçÃಯ ಮಾತೃಭಾಷಾ ದಿನವಾಗಿರುವ ಇದೇ ತಾ. ೨೧ ರಂದು ಈ ನಿಟ್ಟಿನಲ್ಲಿ ತಜ್ಞರ ಸಭೆಯೊಂದನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷೆ ಡಾ|| ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾಹಿತಿ ನೀಡಿದ್ದಾರೆ. ಭಾಷಾ ತಜ್ಞರಾಗಿರುವ ಬೊವ್ವೇರಿಯಂಡ ಉತ್ತಯ್ಯ, ಬಾಚರಣಿಯಂಡ ಅಪ್ಪಣ್ಣ, ಲಿಪಿ ರಚಿಸಿರುವ ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಮೂಕೋಂಡ ನಿತಿನ್ ಕುಶಾಲಪ್ಪ ಸೇರಿದಂತೆ ಇನ್ನು ಹಲವರು ತಜ್ಞರು, ಕೇಂದ್ರೀಯ ಭಾಷಾ ಸಂಸ್ಥೆಯ ಮೂಲಕ ನಿಯೋಜಿಸಲ್ಪಟ್ಟವರು, ಅಕಾಡೆಮಿಯ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ಈಗಾಗಲೇ ರಚಿಸಲ್ಪಟ್ಟಿರುವ ಲಿಪಿಯ ಕುರಿತು ಚರ್ಚೆ, ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶನ ಸಾಧಕ - ಬಾಧಕಗಳ ಕುರಿತು ಸಮಾಲೋಚಿಸಲಾಗುವುದು ಎಂದು ಹೇಳಲಾಗಿದೆ. ಒಂದು ವೇಳೆ ಎಲ್ಲವನ್ನೂ ಕ್ರೋಢೀಕರಿಸಿ ಒಂದೇ ಪ್ರಾಕಾರದ ಲಿಪಿಯನ್ನು ಅಂತಿಮಗೊಳಿಸಲು ಸಾಧ್ಯವಾದ ಪಕ್ಷದಲ್ಲಿ ಕೇಂದ್ರಿಯ ಭಾಷಾ ಸಂಸ್ಥೆಯ ಸಹಕಾರದ ಮೂಲಕ ಮುಂದಿನ ಪ್ರಯತ್ನ ನಡೆಸಲಾಗುತ್ತದೆ ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ. ಅಕಾಡೆಮಿ ಇಲ್ಲಿ ನೇರ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದು ಎಲ್ಲವೂ ಸುಲಲಿತವಾಗಿ ಇತ್ಯರ್ಥಗೊಂಡರೆ ಮಾತ್ರ ಮುಂದಿನ ನಡೆಯ ಕುರಿತು ನಿರ್ಧರಿಸಲಾಗುತ್ತದೆ ಎಂದು ಪಾರ್ವತಿ ಅಪ್ಪಯ್ಯ ಅವರು ಹೇಳಿದ್ದಾರೆ. ಲಿಪಿಯ ಬಗ್ಗೆ ಬೇಕು - ಬೇಡ ಎಂಬ ಅಭಿಪ್ರಾಯಗಳು ಹಿಂದಿನಿAದಲೂ ಇರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.