ಹಿಜಾಬ್ ಪ್ರಕರಣ ವಿಚಾರಣೆ ಮುಂದೂಡಿದ ನ್ಯಾಯಾಲಯ

ಬೆಂಗಳೂರು, ಫೆ. 17: ಹಿಜಾಬ್ ವಿವಾದ ಸಂಬಂಧ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್‍ನ ತ್ರಿಸದಸ್ಯ ಪೀಠ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಿದೆ. ಇಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದು ತಾ. 18 ರಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸುವ ಸಾಧ್ಯತೆ ಇದೆ. ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಾದ ಮಂಡಿಸಿದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪರ ಜಿ.ಆರ್. ಮೋಹನ್ ಅವರು, ಸರ್ಕಾರದ ಹಿಜಾಬ್ ನಿರ್ದೇಶನ ನಮಗೆ ಅನ್ವಯವಾಗುವುದಿಲ್ಲ. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ರಾಜಿ ಸಂಧಾನಕ್ಕೆ ಪ್ರಕರಣ ಒಪ್ಪಿಸಲು ವಕೀಲೆಯೊಬ್ಬರ ಮನವಿ ಮಾಡಲಾಗಿದೆ. ಈ ಬಗ್ಗೆ ನಾನು ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ರಾಜಿ ಸಂಧಾನಕ್ಕೆ ಒಪ್ಪಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಮಧ್ಯಂತರ ಅರ್ಜಿದಾರ ವಕೀಲೆ ವಾದ ಮಂಡಿಸಿದರು. ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿಬರ್ಂಧಿಸಿದಂತೆ ಎಂದು ವಕೀಲ ಕುಲಕರ್ಣಿ ಅವರು ವಾದ ಮಂಡಿಸಿದರು. ಇದಕ್ಕೆ ಸಿಜೆ ಹಿಜಾಬ್ ಮತ್ತು ಖುರಾನ್ ಎರಡು ಒಂದೇ ಅನ್ನುತ್ತೀರಾ ಎಂದರು. ಈಗ ಖುರಾನ್ ನನ್ನ ಬಳಿ ಇಲ್ಲ. ಹೀಗಾಗಿ ಓದಲು ಆಗುವುದಿಲ್ಲ ಎಂದರು. ಈ ಹಿಂದಿನ ಮಧ್ಯಂತರ ಆದೇಶದಲ್ಲಿ ಹಿಜಾಬ್‍ಗೆ ನಿಷೇಧ ಹೇರಲಾಗಿದೆ. ಆದರೆ ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡುವಂತೆ ನ್ಯಾಯಪೀಠವನ್ನು ಕೇಳಿಕೊಂಡರು. ಕಳೆದ ತಾ. 14 ರಿಂದ ಹೈಕೋರ್ಟ್‍ನಲ್ಲಿ ಪ್ರತಿದಿನ ವಿಚಾರಣೆ ನಡೆಯುತ್ತಿದೆ.

ಬಿಬಿಎಂಪಿ ಚುನಾವಣೆ: ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ನವದೆಹಲಿ, ಫೆ. 17: ಅವಧಿ ಮುಗಿದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ತುರ್ತು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ. 2020 ಸೆಪ್ಟೆಂಬರ್‍ನಲ್ಲಿಯೇ ಬಿಬಿಎಂಪಿ ಅವಧಿ ಮುಗಿದ್ದರೂ ಚುನಾವಣೆ ಇನ್ನೂ ನಡೆದಿಲ್ಲ ಎಂದು ಕೆಲ ಅರ್ಜಿದಾರರ ಪರ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು. ದೇಶದಲ್ಲಿ ಸಾಕಷ್ಟು ಚುನಾವಣೆಗಳು ನಡೆಯುತ್ತಿದ್ದರೂ ಅಪೆಕ್ಸ್ ಕೋರ್ಟ್ ಆದೇಶದಿಂದಾಗಿ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಹೇಳಿದರು. ವಿವಾದ ಅವಧಿ ಮುಗಿದಿರುವ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ್ದಾಗಿದೆ ಎಂದು ಅರೋರಾ ಹೇಳಿದಾಗ, ಅರ್ಜಿಯನ್ನು ಪರಿಗಣಿಸುವುದಾಗಿ ನ್ಯಾಯಪೀಠ ಹೇಳಿತು. ಈ ಹಿಂದೆ ಬಿಬಿಎಂಪಿಯ 198 ವಾರ್ಡ್‍ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಕರ್ನಾಟಕ ಸರ್ಕಾರ ಕೋರಿತ್ತು. ಬಿಬಿಎಂಪಿ ಅವಧಿ 2020ರಲ್ಲಿಯೇ ಮುಗಿದಿದ್ದು, ಚುನಾವಣಾ ಪ್ರಕ್ರಿಯೆಗೆ ನಿವೃತ್ತ ಸಿಜೆಐ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯ ಪೀಠ ತಡೆ ನೀಡಿದ್ದರಿಂದ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಲಾಗಿತ್ತು. ಆರು ವಾರಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಳೆದ ವರ್ಷದ ಡಿಸೆಂಬರ್ 4 ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ರೂ. 500 ಕೋಟಿ

ಬೆಂಗಳೂರು, ಫೆ. 17: ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯದ ಬಲವರ್ಧನೆಗಾಗಿ ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಕಾರ್ಯದಲ್ಲಿ ಇನ್ನಷ್ಟು ಪ್ರಗತಿ ಕಂಡುಬಂದಿದ್ದು, ಈಗ ರೂ. 500 ಕೋಟಿ ವೆಚ್ಚದ ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಈ ಮಹತ್ವದ ಹೆಜ್ಜೆಯಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕಾರ್ಯಕ್ಕೆ ಮತ್ತಷ್ಟು ಆದ್ಯತೆ ದೊರೆತಿದೆ ಎಂದು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ 100 ಎಂಬಿಬಿಎಸ್ ಸೀಟುಗಳ ಕಾಲೇಜು ಆರಂಭವಾಗಲಿದ್ದು, ನೂತನ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ. ಈ ನಡುವೆಯೇ, ಚಿತ್ರದುರ್ಗದಲ್ಲಿ 150 ಎಂಬಿಬಿಎಸ್ ಸೀಟುಗಳನ್ನು ಹೊಂದಲಿರುವ 'ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ' ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಿವಿಲ್ ಕಾಮಗಾರಿ ಸೇರಿ ಒಟ್ಟು ರೂ. 500 ಕೋಟಿ ಖರ್ಚಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿರುವ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜೊತೆ ಹೊಸದಾಗಿ 4 ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 100 ಎಂಬಿಬಿಎಸ್ ಸೀಟುಗಳ ಪ್ರವೇಶ ಮಿತಿಯೊಂದಿಗೆ 2022-23ನೇ ಸಾಲಿಗೆ ಲೆಟರ್ ಆಫ್ ಇಂಟೆಂಟ್ ನೀಡಲಾಗಿದೆ.

ವಿವಾಹ : ಗಂಗೆ ಪೂಜೆ ವೇಳೆ ಬಾವಿಗೆ ಬಿದ್ದು 13 ಮಂದಿ ದುರ್ಮರಣ!

ಖುಷಿನಗರ, ಫೆ. 17: ಮದುವೆ ಸಮಾರಂಭಕ್ಕೆಂದು ಬಂದು ಗಂಗೆ ಪೂಜೆ ವೇಳೆ ಬಾವಿಯಲ್ಲಿ ಬಿದ್ದು ಮಕ್ಕಳು, ಮಹಿಳೆಯರು ಸೇರಿ 13 ಮಂದಿ ಸಾವನ್ನಪ್ಪಿರುವ ಘಟನೆ ನೆಬುವಾ ನೌರಂಗಿಯಾ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿವಾಹದ ಸಂದರ್ಭದಲ್ಲಿ ಗಂಗೆ ಪೂಜೆ ಮಾಡುವುದು ಕುಟುಂಬದ ಸಂಪ್ರದಾಯವಾಗಿದ್ದು, ಗಂಗೆ ಪೂಜೆಗೆಂದು ಬಾವಿ ಬಳಿ ನೂರಾರು ಜನರು ಸೇರಿದ್ದಾರೆ. ಕೆಲವು ಮಹಿಳೆಯರು ಹಾಗೂ ಮಕ್ಕಳು ಗಂಗೆ ಪೂಜೆಯನ್ನು ಬಾವಿಯ ಮೇಲ್ಚಾವಣಿ ಮೇಲೆ ಕುಳಿತು ನೋಡುತ್ತಿದ್ದರು. ಬಾವಿಯು ಹಳೆಯದಾಗಿದ್ದು, ಮೇಲ್ಚಾವಣಿ ದುರ್ಬಲವಾಗಿದ್ದರಿಂದ ಕುಸಿದು ಬಿದ್ದಿದೆ. ಪರಿಣಾಮ ಮೇಲ್ಚಾವಣಿ ಮೇಲೆ ಕುಳಿತಿದ್ದ ಮಹಿಳೆಯರು ಹಾಗೂ ಮಕ್ಕಳು ಬಾವಿಗೆ ಬಿದ್ದಿದ್ದಾರೆ. ಬಳಿಕ ಬಾವಿಯೊಳಗೆ ಬಿದ್ದ ತಮ್ಮ ಕುಟುಂಬಸ್ಥರನ್ನು ಕಾಪಾಡಲು ಒಬ್ಬರ ಹಿಂದೆ ಒಬ್ಬರು ಮಹಿಳೆಯರು ಬಾವಿಗೆ ಹಾರಿದ್ದಾರೆ. ಹೀಗೆ ಸುಮಾರು 25ಕ್ಕೂ ಹೆಚ್ಚು ಮಂದಿ ಮಹಿಳೆಯರು ಬಾವಿಗೆ ಬಿದ್ದಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಕೆಲವರನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಘಟನೆಯಲ್ಲಿ 9 ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 18 ಮಂದಿ ಮಹಿಳೆಯರಿಗೆ ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಗ್ರಾಮಸ್ಥರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಕ್ರೇನ್ ಪರಿಸ್ಥಿತಿ ಬಗ್ಗೆ ಭಾರತಕ್ಕೆ ಯುರೋಪಿಯನ್ ಒಕ್ಕೂಟ ಮಾಹಿತಿ

ನವದೆಹಲಿ, ಫೆ. 17: ಉಕ್ರೇನ್‍ನಲ್ಲಿನ ಪರಿಸ್ಥಿತಿ ಮೌಲ್ಯಮಾಪನದ ಬಗ್ಗೆ ಯೂರೋಪಿಯನ್ ಒಕ್ಕೂಟ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದುವೇಳೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದರೆ ಆಗುವ ಸಂಭಾವ್ಯ ಪರಿಣಾಮಗಳ ಬಗ್ಗೆಯೂ ಈ ರಾಷ್ಟ್ರಗಳು ಯೋಚಿಸುತ್ತಿವೆ. ಭಾರತವು "ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ ಮತ್ತು ಉಕ್ರೇನ್ ಬಿಕ್ಕಟ್ಟಿನ ಕುರಿತು 27 ರಾಷ್ಟ್ರಗಳ ಗುಂಪು ಹೊಸ ದೆಹಲಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ರಾಜತಾಂತ್ರಿಕತೆ ಮತ್ತು ಸಂಭಾಷಣೆಯ ಮೂಲಕ ಪರಿಸ್ಥಿತಿ ಶಮನಗೊಳಿಸಲು ಎಲ್ಲಾ ಮಾರ್ಗಗಳನ್ನು ಅನ್ನೇಷಿಸಲಾಗುತ್ತಿದೆ ಎಂದು ಯುರೋಪಿಯನ್ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮ್ಯೂನಿಚ್ ಭದ್ರತಾ ಸಮ್ಮೇಳನ ಮತ್ತು ಇಂಡೋ-ಪೆಸಿಫಿಕ್ ಕುರಿತ ಸಚಿವರ ಸಭೆಯಲ್ಲಿ ಭಾಗವಹಿಸಲು ಈ ವಾರ ಯುರೋಪ್‍ಗೆ ಪ್ರಯಾಣಿಸಲಿದ್ದಾರೆ. ಯೂರೋಪಿನಲ್ಲಿ ಜೈಶಂಕರ್ ಸಭೆಯಲ್ಲಿ ಉಕ್ರೇನ್ ಪರಿಸ್ಥಿತಿ ಅವಲೋಕಿಸಲಾಗುತ್ತದೆ. ಯುರೋಪಿಯನ್ ಒಕ್ಕೂಟ ಉಕ್ರೇನ್ ಪರವಾಗಿ ನಿಂತಿದೆ. ಒಂದುವೇಳೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದರೆ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನಾವು ಭಾರತವನ್ನು ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿ ನೋಡುತ್ತೇವೆ, ನಮ್ಮ ಅಭಿಪ್ರಾಯಗಳು ಮತ್ತು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತೇವೆ. ಮಾತುಕತೆಯ ಕಡೆಗೆ ನಮ್ಮ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಆದರೆ. ನಾವು ಪಡೆಗಳು ಮತ್ತು ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹಣೆಯನ್ನು ನೋಡಿದ್ದೇವೆ ಮತ್ತು ಉಕ್ರೇನ್‍ಗೆ ಸ್ಪಷ್ಟವಾಗಿ ಬೆದರಿಕೆ ಇದೆ.